ಭಗವದ್ಗೀತೆಯನ್ನು ಒಂದೇ ಧರ್ಮದ ಚೌಕಟ್ಟಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಭಗವದ್ಗೀತೆ ಧರ್ಮಗಳನ್ನು ಮೀರಿದ, ಕಾಲಾತೀತ ಮತ್ತು ಸಾರ್ವತ್ರಿಕ ಸಂದೇಶ ಹೊಂದಿರುವ ಗ್ರಂಥವಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಭಗವದ್ಗೀತೆ, ವೇದಾಂತ ಅಥವಾ ಯೋಗದಂತಹ ವಿಷಯಗಳನ್ನು ಕಲಿಸುವುದೇ ಒಂದು ಸಂಸ್ಥೆಯನ್ನು ಧಾರ್ಮಿಕ ಸಂಸ್ಥೆ ಎಂದು ಗುರುತಿಸಲು ಸಾಕ್ಷಿಯಾಗುವುದಿಲ್ಲ. ಇವು ನೈತಿಕ ವಿಜ್ಞಾನ ಮತ್ತು ತತ್ವಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳಾಗಿವೆ ಎಂದು ತಿಳಿಸಿದೆ.
ಕೊಯಮತ್ತೂರು ಮೂಲದ ಆರ್ಷ ವಿದ್ಯಾ ಪರಂಪರೆ ಟ್ರಸ್ಟ್, ವೇದಾಂತ, ಸಂಸ್ಕೃತ ಹಾಗೂ ಹಠ ಯೋಗವನ್ನು ಕಲಿಸುವ ಜೊತೆಗೆ ಪ್ರಾಚೀನ ಗ್ರಂಥಗಳ ಡಿಜಿಟಲೀಕರಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ವಿದೇಶಿ ದೇಣಿಗೆ ಪಡೆಯಲು 2021ರಲ್ಲಿ ಟ್ರಸ್ಟ್ ಎಫ್.ಸಿ.ಆರ್.ಎ ನೋಂದಣಿಗೆ ಅರ್ಜಿ ಸಲ್ಲಿಸಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯ, ಟ್ರಸ್ಟ್ ಚಟುವಟಿಕೆಗಳು ಧಾರ್ಮಿಕ ಚಟುವಟಿಕೆ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿತ್ತು.
ಈ ನಿರಾಕರಣೆಯನ್ನು ಪ್ರಶ್ನಿಸಿ ಟ್ರಸ್ಟ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್, ಕೇಂದ್ರ ಸರ್ಕಾರದ ವಾದಗಳನ್ನು ತಳ್ಳಿಹಾಕಿದ್ದಾರೆ. ಭಗವದ್ಗೀತೆ ಒಂದು ಧರ್ಮಕ್ಕೆ ಸೀಮಿತವಲ್ಲ, ಅದು ಭಾರತೀಯ ನಾಗರಿಕತೆಯ ಭಾಗ. ಯೋಗವನ್ನು ಧಾರ್ಮಿಕ ದೃಷ್ಟಿಯಿಂದ ನೋಡುವುದು ಸರಿಯಲ್ಲ, ಅದು ಸಂಪೂರ್ಣವಾಗಿ ಸಾರ್ವತ್ರಿಕ ಎಂದು ಹೇಳಿದ್ದಾರೆ.
ಎಫ್.ಸಿ.ಆರ್.ಎ ಕಾಯ್ದೆ ಅಡಿಯಲ್ಲಿ ಸಂಸ್ಥೆಯನ್ನು ಧಾರ್ಮಿಕವೆಂದು ಪರಿಗಣಿಸಲು ಸ್ಪಷ್ಟ ಪುರಾವೆಗಳು ಅಗತ್ಯ. ಕೇವಲ ಅನುಮಾನದ ಆಧಾರದ ಮೇಲೆ ಅರ್ಜಿಯನ್ನು ತಿರಸ್ಕರಿಸುವುದು ಸರಿಯಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೇ, ಕೇಂದ್ರ ಸರ್ಕಾರ ಹೊರಡಿಸಿದ್ದ ನಿರಾಕರಣೆ ಆದೇಶವನ್ನು ರದ್ದುಗೊಳಿಸಿರುವ ಹೈಕೋರ್ಟ್, ಟ್ರಸ್ಟ್‌ನ ಅರ್ಜಿಯನ್ನು ಮರುಪರಿಶೀಲಿಸಿ ಮೂರು ತಿಂಗಳೊಳಗೆ ತೀರ್ಮಾನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಇದೇ ವೇಳೆ, ಭಗವದ್ಗೀತೆ ಭಾರತೀಯ ಸಂಸ್ಕೃತಿಯ ಜಾಗತಿಕ ಸಂಕೇತವಾಗಿದ್ದು, ಅದನ್ನು ಪ್ರಧಾನಿ ನರೇಂದ್ರ ಮೋದಿ ವಿದೇಶಿ ನಾಯಕರಿಗೆ ಉಡುಗೊರೆಯಾಗಿ ನೀಡುತ್ತಿರುವುದನ್ನು ಕೂಡ ಕೋರ್ಟ್ ಉಲ್ಲೇಖಿಸಿದೆ.
