News

ಆರ್ಟಿಐ ಅರ್ಜಿ ವಿಲೇವಾರಿಗೂ ಲಂಚ: ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್

Share It

ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಲೇವಾರಿಗೆ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇರೆಗೆ ರಾಜ್ಯ ಮಾಹಿತಿ ಆಯುಕ್ತ ರವೀಂದ್ರ ಗುರುನಾಥ್‌ ಢಾಕಪ್ಪ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಲೋಕಾಯುಕ್ತ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ಹಾಗೂ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸಬೇಕೆಂದು ಕೋರಿ ಢಾಕಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ಪೀಠ ಈ ಆದೇಶ ನೀಡಿದೆ. ಹೈಕೋರ್ಟ್ ತನ್ನ ಆದೇಶದಲ್ಲಿ, ಆರೋಪ ಸಾಬೀತುಪಡಿಸಲು ಧ್ವನಿ ರೆಕಾರ್ಡಿಂಗ್‌ ಇದೆ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಪುರಾವೆಗಳಿವೆ. ಹೀಗಾಗಿ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದೆ.

ಸ್ಥಳೀಯ ಪತ್ರಿಕೆಯೊಂದರ ಪತ್ರಕರ್ತ ಸಾಯಿಬಣ್ಣ ಬೆಂಕನಹಳ್ಳಿ ಅವರಿಂದ ಸಲ್ಲಿಸಿದ್ದ ಮೇಲ್ಮನವಿಗಳನ್ನು ಇತ್ಯರ್ಥಪಡಿಸುವುದಕ್ಕೆ 3 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಸಂಬಂಧ ಮಾರ್ಚ್ 27ರಂದು ದೂರು ದಾಖಲಿಸಿದ್ದರು. ಬೇಡಿಕೆಯ 3 ಲಕ್ಷ ರೂಪಾಯಿಗಳಲ್ಲಿ 1 ಲಕ್ಷ ರೂಪಾಯಿಗಳನ್ನು ಸಾಯಿ ಹರ್ಷ ಎಂಬುವರ ಖಾತೆಗೆ ಯುಪಿಐ ಮೂಲಕ ವರ್ಗಾವಣೆ ಮಾಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರ ಢಾಕಪ್ಪ ಪರ ವಕೀಲರು, ದೂರುದಾರರು ಆರೋಪಿಸಿರುವ ಮೊತ್ತವು ಸಾಯಿ ಹರ್ಷ ಎಂಬುವರ ಬ್ಯಾಂಕ್‌ ಖಾತೆಗೆ ಜಮೆ ಆಗಿದೆ. ಹಣ ವರ್ಗಾವಣೆ ತಪ್ಪಾಗಿದೆ ಎಂದು ಗೊತ್ತಾದ ನಂತರ ಹಣವನ್ನು ಮೂರು ನಿಮಿಷಗಳಲ್ಲಿ ದೂರುದಾರರ ಬ್ಯಾಂಕ್‌ ಖಾತೆಗೆ ಹಿಂದಿರುಗಿಸಲಾಗಿದೆ. ಘಟನೆಗೂ ತಮ್ಮ ಕಕ್ಷಿದಾರರಿಗೂ ಯಾವುದೇ ಸಂಬಂಧವಿಲ್ಲ. ದೂರು ನೀಡಿರುವ ಸಂಬಂಧ ಸಾಕಷ್ಟು ಗಂಭೀರ ಅನುಮಾನಗಳಿವೆ. ಹೀಗಾಗಿ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿದ್ದರು.

ಲೋಕಾಯುಕ್ತ ಪರ ವಕೀಲರು, ದೂರುದಾರ ಮತ್ತು ಅರ್ಜಿದಾರರ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದೆ. ಒಟ್ಟು 9 ನಿಮಿಷಗಳ ಕಾಲ ಫೋನ್ ಕರೆಗಳಲ್ಲಿ ಮಾತನಾಡಿದ್ದಾರೆ. ಒಂದು ಕರೆಯಲ್ಲಿ 1 ಲಕ್ಷ ರೂಪಾಯಿ ಹಣದ ವಿಚಾರವಾಗಿ ಚರ್ಚೆ ನಡೆದಿದೆ. ಆದ್ದರಿಂದ ಅರ್ಜಿ ವಜಾಗೊಳಿಸಿ, ತನಿಖೆ ಮುಂದುವರೆಸಲು ಅವಕಾಶ ನೀಡಬೇಕು ಎಂದು ಕೋರಿದ್ದರು.


Share It

You cannot copy content of this page