ಅನುಕಂಪದ ಆಧಾರದಲ್ಲಿ ಉದ್ಯೋಗಾವಕಾಶ ಪಡೆಯುವುದು ಹಕ್ಕಲ್ಲ ಎಂದು ತಿಳಿಸಿರುವ ಹೈಕೋರ್ಟ್, ಕುಟುಂಬದ ಸದಸ್ಯರು ಈಗಾಗಲೇ ಒಂದು ಸಂಸ್ಥೆಯಲ್ಲಿ ನೌಕರರಾಗಿದ್ದಲ್ಲಿ ಅದೇ ಸಂಸ್ಥೆಯಲ್ಲಿ ಅನುಕಂಪದ ಆಧಾರದಲ್ಲಿ ಮತ್ತೊಬ್ಬ ಸದಸ್ಯರಿಗೆ ಉದ್ಯೋಗ ನೀಡಲಾಗದು ಎಂದು ಹೈಕೋರ್ಟ್ ಆದೇಶಿಸಿದೆ.
ಅನುಕಂಪದ ಆಧಾರದಲ್ಲಿ ಉದ್ಯೋಗಾವಕಾಶ ನೀಡಲು ನಿರಾಕರಿಸಿದ್ದ ಕರ್ನಾಟಕ ವಿದ್ಯುತ್ ಸರಬರಾಜು ಮಂಡಳಿ (ಕೆಪಿಟಿಸಿಎಲ್) ಕ್ರಮವನ್ನು ಎತ್ತಿ ಹಿಡಿದಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಬೆಂಗಳೂರಿನ ರಂಗನಾಥ್ ಎಂಬುವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿದಾರರ ಸಹೋದರ ಈಗಾಗಲೇ ಕೆಪಿಟಿಸಿಎಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಅನುಕಂಪದ ಆಧಾರದಲ್ಲಿ ಮತ್ತೊಂದು ಹುದ್ದೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರಾದ ರಂಗನಾಥ್ ಅವರ ತಂದೆ ಎನ್. ರಾಮಯ್ಯ ಅವರು ಕೆಪಿಟಿಸಿಎಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, 2002ರ ಅಕ್ಟೋಬರ್ 7 ರಂದು ನಾಪತ್ತೆಯಾಗಿದ್ದರು. ಆ ಬಳಿಕ 2010ರಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ಕೋರಿ ರಂಗನಾಥ್ ಅವರ ತಾಯಿ ಕೆಪಿಟಿಸಿಎಲ್‌ಗೆ ಮನವಿ ಮಾಡಿದ್ದರು. ಈ ಮನವಿಯನ್ನು ಕೆಪಿಟಿಸಿಎಲ್ ತಿರಸ್ಕರಿಸಿತ್ತು.
ನಂತರ ರಂಗನಾಥ್ ಅವರು ತಂದೆ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೂಲಕ ಬಿಬಿಎಂಪಿಯಿಂದ ತಂದೆಯ ಮರಣ ಪ್ರಮಾಣ ಪತ್ರವನ್ನು 2011ರಲ್ಲಿ ಪಡೆದಿದ್ದರು. 2012ರಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ರಂಗನಾಥ್, ಅನುಕಂಪದ ಆಧಾರದಲ್ಲಿ ತಂದೆಯ ಹುದ್ದೆಗೆ ನೇಮಕ ಮಾಡಿಕೊಳ್ಳುವಂತೆ ಕೆಪಿಟಿಸಿಎಲ್‌ಗೆ ಸೂಚನೆ ನೀಡಬೇಕು ಎಂದು ಕೋರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅರ್ಜಿದಾರರ ಮನವಿಯನ್ನು ಕಾನೂನು ಪ್ರಕಾರ ಪರಿಗಣಿಸುವಂತೆ ಕೆಪಿಟಿಸಿಎಲ್‌ಗೆ ನಿರ್ದೇಶಿಸಿತ್ತು.
ಅರ್ಜಿ ಪರಿಶೀಲಿಸಿದ ಕೆಪಿಟಿಸಿಎಲ್ ರಂಗನಾಥ್ ಕುಟುಂಬದ ಸದಸ್ಯರು ಇದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ, ಮತ್ತೊಬ್ಬರಿಗೆ ಅನುಕಂಪದ ಅಡಿ ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಿ 2013ರಲ್ಲಿ ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ರಂಗನಾಥ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಕೆಪಿಟಿಸಿಎಲ್‌ನ ನಿರ್ಣಯವನ್ನು ಎತ್ತಿ ಹಿಡಿದು ಅರ್ಜಿಯನ್ನು 2014ರಲ್ಲಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಂಗನಾಥ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ತೀರ್ಪು: ರಂಗನಾಥ್ ರವರ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ‘ಕುಟುಂಬದ ಸದಸ್ಯರು ಈಗಾಗಲೇ ಸರ್ಕಾರದ ಅಧೀನ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಆ ಕುಟುಂಬದ ಮತ್ತೊಬ್ಬ ಸದಸ್ಯನಿಗೆ ಅದೇ ಸಂಸ್ಥೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ಕಲ್ಪಿಸಲಾಗದು. ಅನುಕಂಪದ ಆಧಾರಿತ ಉದ್ಯೋಗ ಪಡೆಯುವುದು ಹಕ್ಕಲ್ಲ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೇ, ಮೇಲ್ಮನವಿದಾರರ ಸಹೋದರ ಈಗಾಗಲೇ ಕೆಪಿಟಿಸಿಎಲ್‌ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಆದ್ದರಿಂದ ಅದೇ ಸಂಸ್ಥೆಯಲ್ಲಿ ಮೇಲ್ಮನವಿದಾರರಿಗೂ ಅನುಕಂಪ ಆಧಾರದಲ್ಲಿ ಮತ್ತೊಂದು ಉದ್ಯೋಗ ನೀಡಲಾಗದು. ಹೀಗಾಗಿ ಅರ್ಜಿದಾರರ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ. ಅದರಂತೆ ಏಕಸದಸ್ಯ ಪೀಠದ ಆದೇಶದಲ್ಲಿ ಯಾವುದೇ ದೋಷಗಳು ಕಂಡು ಬರುವುದಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.
(WA No. 2457 of 2014)
