ರಾಜಧಾನಿ ಬೆಂಗಳೂರಿನ ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ದೀರ್ಘ ಕಾಲದಿಂದ ನಿಲುಗಡೆ ಮಾಡಿರುವ ಅಪರಿಚಿತ ಹಾಗೂ ವಾರಸುದಾರರು ಪತ್ತೆಯಾಗದ ವಾಹನಗಳನ್ನು ಹರಾಜು ಹಾಕಲು ಹೈಕೋರ್ಟ್ ಸೂಚಿಸಿದೆ.
ನಗದರಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸುವಂತೆ ಕೋರಿ ಪ್ರಶಾಂತ್ ರಾವ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಈ ವಾಹನಗಳನ್ನು ಹರಾಜು ಮಾಡಲು ಸೂಚಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಹಾಗೂ ರಸ್ತೆಗಳಲ್ಲಿ ಬಿಟ್ಟು ಹೋಗಿರುವ ಅಪರಿಚಿತ ಮತ್ತು ವಾರಸುದಾರರು ಪತ್ತೆಯಾಗದ ವಾಹಗಳ ಸ್ಥಳಾಂತರ, ಅವುಗಳ ಹರಾಜು ಹಾಕುವ ಸಂಬಂಧ ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳು ಸಭೆಯ ನಿರ್ಣಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಅಲ್ಲದೇ, ರಸ್ತೆಗಳಲ್ಲಿ ಬಿಟ್ಟು ಹೋಗಿರುವ ವಾಹನಗಳನ್ನು ಸ್ಥಳಾಂತರ ಮಾಡಲು ನಾಲ್ಕು ಸ್ಥಳಗಳನ್ನು ಗುರುತಿಸಲಾಗಿದೆ. ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳ ಮೂಲಕ ವಾಹನ ಮಾಲೀಕರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, ರಸ್ತೆ ಬದಿ ನಿಂತಲ್ಲೇ ನಿಂತಿರುವ ವಾಹನಗಳನ್ನು ತೆಗೆಯುವಂತೆ ಸ್ಟಿಕ್ಕರ್ ಅಳವಡಿಸಲಾಗುವುದು.
ಆ ಬಳಿಕವೂ ತೆಗೆದು ಕೊಂಡು ಹೋಗದಿದ್ದರೆ 15 ದಿನಗಳ ನಂತರ ಆರ್‌ಟಿಒ ಕಚೇರಿಗೆ ತಂದು ಮಾಲೀಕರನ್ನು ಸಂಪರ್ಕಿಸಲಾಗುವುದು. ಮಾಲೀಕರು ಸಿಗದಿದ್ದರೆ ಕೋರ್ಟ್ ಅನುಮತಿ ಪಡೆದು ಹರಾಜು ಹಾಕಲಾಗುವುದು. ಆ ರೀತಿ ವಾಹನಗಳನ್ನು ಹರಾಜು ಹಾಕುವ ಮುನ್ನ ಪತ್ರಿಕಾ ಪ್ರಕಟಣೆ ನೀಡಲಾಗುವುದು ಎಂದು ಸರ್ಕಾರದ ಪರ ವಕೀಲರು ವಿವರಿಸಿದ್ದಾರೆ.
