ಕೋಚಿಂಗ್ ಕೇಂದ್ರಗಳು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದಾಖಲು ಮಾಡಿಕೊಳ್ಳುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಕೋಚಿಂಗ್ ಸೆಂಟರ್‌ಗಳಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಸಂಬಂಧ ಸಲ್ಲಿಕೆಯಾಗಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಶಿಕ್ಷಣ ಸಚಿವಾಲಯ ಈ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ವಿದ್ಯಾರ್ಥಿಗಳ ದಾಖಲಾತಿ ಮತ್ತು ಶುಲ್ಕಕ್ಕೆ ಸಂಬಂಧಿಸಿದಂತೆ ಕೋಚಿಂಗ್ ಸೆಂಟರ್ ಗಳಿಗೆ ಷರತ್ತು ವಿಧಿಸಿರುವ ಕೇಂದ್ರ ಸರ್ಕಾರ, ವಿದ್ಯಾರ್ಥಿಗಳ ದಾಖಲಾತಿ ನವೀಕರಣ ಪ್ರಕ್ರಿಯೆ ಒಳಗೊಂಡ ನಿಯಮದಡಿ ಅರ್ಜಿ ಸ್ವೀಕರಿಸುವಂತೆ ನಿರ್ದೇಶನ ನೀಡಿದೆ.
ಅಲ್ಲದೇ, ಗುಣಮಟ್ಟದ ಬೋಧಕ ಸಿಬ್ಬಂದಿ ನೇಮಿಸಿಕೊಳ್ಳಬೇಕು, ಸಮಂಜಸವಾದ ಶುಲ್ಕ ವ್ಯವಸ್ಥೆಯನ್ನು ಪಾರದರ್ಶಕವಾಗಿ ರೂಪಿಸಬೇಕು. ಕೋಚಿಂಗ್ ಕೇಂದ್ರಗಳ ಚಟುವಟಿಕೆಗಳ ಮೇಲೆ ಪೂರ್ಣ ನಿಗಾ ವಹಿಸಬೇಕು ಮತ್ತು ಇಂತಹ ಕೇಂದ್ರಗಳ ನೋಂದಣಿ ಜವಾಬ್ದಾರಿಯನ್ನು ಆಯಾ ರಾಜ್ಯ ಸರ್ಕಾರಗಳು ಹೊರಬೇಕು ಎಂದು ಹೇಳಿದೆ.
ಒಂದು ಲಕ್ಷ ದಂಡ: ಕೋಚಿಂಗ್ ಸೆಂಟರ್ ಗಳು ವಿದ್ಯಾರ್ಥಿಗಳಿಂದ ಅತಿಯಾದ ಶುಲ್ಕ ಪಡೆದರೆ ಒಂದು ಲಕ್ಷ ರೂಪಾಯಿ ದಂಡ ವಿಧಿಸುವ ಹಾಗೂ ಕೋಚಿಂಗ್ ಸೆಂಟರ್ ನ ನೋಂದಣಿಯನ್ನು ರದ್ದು ಪಡಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಕೇಂದ್ರ ಶಿಕ್ಷಣ ಸಚಿವಾಲಯವು ಕೋಚಿಂಗ್ ಸೆಂಟರ್ ಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗುರುವಾರ ಈ ಮಾರ್ಗಸೂಚಿ ಪ್ರಕಟಿಸಿದೆ.
ಮಾರ್ಗಸೂಚಿ ಪ್ರಮುಖ ಅಂಶಗಳು:
*ಕೋಚಿಂಗ್ ಸೆಂಟರ್ ಗಳು ಪೋಷಕರಿಗಾಗಲಿ, ವಿದ್ಯಾರ್ಥಿಗಳಿಗಾಗಲಿ ಪೊಳ್ಳು ಭರವಸೆಗಳನ್ನು ನೀಡುವಂತಿಲ್ಲ.
*ಬೋಧನಾ ಶುಲ್ಕ ನ್ಯಾಯೋಚಿತವಾಗಿರಬೇಕು ಮತ್ತು ರತಿಗಳನ್ನು ನೀಡಬೇಕು.
*ಪದವಿಗಿಂತ ಕಡಿಮೆ ಶಿಕ್ಷಣ ಹೊಂದಿರುವವರನ್ನು ಶಿಕ್ಷಕರಾಗಿ ನೇಮಿಸಿಕೊಳ್ಳುವಂತಿಲ್ಲ.
*ದ್ವಿತೀಯ ಪಿಯು ನಂತರದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಬೇಕು.
*ಯಾವುದೇ ವಿದ್ಯಾರ್ಥಿ ಕೋರ್ಸ್ ನ ಪೂರ್ಣ ಶುಲ್ಕ ಪಾವತಿಸಿ ಅರ್ಧಕ್ಕೆ ನಿಲ್ಲಿಸಿದರೆ 10 ದಿನದಲ್ಲಿ ಮರುಪಾವತಿಸಬೇಕು, ಜೊತೆಗೆ ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದರೆ ಹಾಸ್ಟೆಲ್ ಶುಲ್ಕ, ಮೆಸ್ ಶುಲ್ಕವನ್ನು ಮರು ಪಾವತಿಸಬೇಕು.
*ಪ್ರತಿ ವಿದ್ಯಾರ್ಥಿಗೆ ಕನಿಷ್ಠ ಸ್ಥಳವಕಾಶ ಇದ್ದರೆ ಮಾತ್ರ ನೋಂದಣಿ ಮಾಡಿಕೊಳ್ಳಬೇಕು.
*ಕೋಚಿಂಗ್ ಸೆಂಟರ್ ಕುರಿತು ವಿದ್ಯಾರ್ಥಿಗಳ ಫಲಿತಾಂಶ ಆಧರಿಸಿ ಪ್ರತ್ಯಕ್ಷ ಅಥವಾ ಪರೋಕ್ಷ ಜಾಹೀರಾತು ನೀಡಬಾರದು.
