ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.
ಹಿರಿಯ ಅಧಿಕಾರಿಗಳ ಜೊತೆ ದುರ್ವರ್ತನೆ ತೋರಿದ್ದ ಹಾಗೂ ಅವರ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಸೇವೆಯಿಂದಲೇ ವಜಾಗೊಂಡಿದ್ದ ಪೇದೆಯನ್ನು ಸೇವೆಗೆ ಮರಳಿ ಸೇರಿಸಿಕೊಳ್ಳುವಂತೆ ಹೈಕೋರ್ಟ್ ಆದೇಶಿಸಿದೆ.
ದುರ್ವರ್ತನೆ ಕಾರಣಕ್ಕೆ ಸೇವೆಯಿಂದಲೇ ವಜಾಗೊಳಿಸುವುದು ಹೆಚ್ಚಿನ ಶಿಕ್ಷೆ ಎನ್ನಿಸಲಿದೆ ಎಂದು ಅಭಿಪ್ರಾಯಪಟ್ಟಿರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, 27 ವರ್ಷಗಳ ಹಿಂದೆ ವಜಾಗೊಂಡಿದ್ದ ಸಿಐಎಸ್ಎಫ್ ಪೇದೆಯನ್ನು ಸೇವೆಗೆ ಮರಳಿ ಸೇವೆಗೆ ಸೇರಿಸಿಕೊಳ್ಳುವಂತೆ ಆದೇಶ ನೀಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ತಪ್ಪು ಮಾಡಿದಾಗ ಸೂಕ್ತ ಶಿಕ್ಷೆ ವಿಧಿಸುವ ಅಗತ್ಯವಿರುತ್ತದೆ. ಇಂತಹ ಶಿಕ್ಷೆಯು ತಪ್ಪಿನ ಗಂಭೀರತೆಗೆ ಅನುಗುಣವಾಗಿ ನೀಡಬೇಕಿರುತ್ತದೆ. ಆದರೆ ಆತ್ಮಸಾಕ್ಷಿಗೆ ಆಘಾತವನ್ನುಂಟು ಮಾಡುವಂತೆ ಶಿಕ್ಷೆಯು ಇರಬಾರದು ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ, ಸೇವಾ ವಿಷಯಗಳಲ್ಲಿ, ವಿಶೇಷವಾಗಿ ಸಿಐಎಸ್ಎಫ್ ನಂತರ ನಾಗರಿಕ ಅಥವಾ ಅರೆ ಮಿಲಿಟರಿ ಪಡೆಗಳು ಒಳಗೊಂಡಿರುವ ಶಿಸ್ತುಕ್ರಮಗಳು ನ್ಯಾಯಾಲಯದ ಪರಿಶೀಲನೆಗೆ ಒಳಪಡುವ ವಿಚಾರಗಳಾಗಿರುತ್ತವೆ. ಈ ಪಡೆಗಳು ವಿವೇಚನಾಧಿಕಾರವನ್ನು ಸೂಕ್ತ ರೀತಿಯಲ್ಲಿ ಬಳಸದೇ ಅನಿಯಂತ್ರಿತವಾಗಿ ಬಳಸಿದರೆ ಅಥವ ದುರುದ್ದೇಶದಿಂದ ಬಳಕೆಯಾದರೆ ನ್ಯಾಯಾಲಯವು ಪರಿಶೀಲಿಸುವ ಅಗತ್ಯವಿರುತ್ತದೆ ಎಂದು ಅಭಿಪ್ರಾಯಪಟ್ಟು ಸಿಐಎಸ್ಎಪ್ ನ ವಜಾ ಆದೇಶವನ್ನು ರದ್ದುಪಡಿಸಿದೆ. ಹಾಗೆಯೇ, ಪೇದೆ ರವೀಂದರ್ ಸಿಂಗ್ ರಾಣಾನನ್ನು ಸೇವೆಗೆ ಮರಳಿ ಸೇರಿಸಿಕೊಳ್ಳುವಂತೆ ಆದೇಶಿಸಿದೆ.
ಅರ್ಜಿದಾರ ರಾಣಾ 1992 ರಲ್ಲಿ ಸಿಐಎಸ್ಎಫ್ ಗೆ ಸೇರ್ಪಡೆಗೊಂಡಿದ್ದರು. 1998 ರಲ್ಲಿ ಮೇಲಧಿಕಾರಿ ಮೇಲೆ ಹಲ್ಲೆ ಮಾಡಿದಂತೆ ಹಾಗೂ ಅನುಚಿತ ವರ್ತನೆ ತೋರಿದ ಆರೋಪದಡಿ ಅಮಾನತುಪಡಿಸಲಾಗಿತ್ತು. ನಂತರ ಇಲಾಖಾ ವಿಚಾರಣೆ ನಡೆಸಿ ಸೇವೆಯಿಂದಲೇ ವಜಾಗೊಳಿಸಲಾಗಿತ್ತು. ನಂತರ ರಾಣಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣವನ್ನು ಆಲಿಸಿದ ಹೈಕೋರ್ಟ್, ವಿಚಾರಣೆ ಹಂತದಲ್ಲಿ 10 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. ಆದರೆ ಅವರುಗಳು ಪ್ರಾಸಿಕ್ಯಾಷನ್ ಸಾಕ್ಷಿಯನ್ನು ಬೆಂಬಲಿಸಿಲ್ಲ. ಇವರಲ್ಲಿ 6 ಸಾಕ್ಷಿಗಳು ಅಂತಹ ಅಹಿತಕರ ಘಟನೆ ನಡೆದಿಲ್ಲ ಎಂದೇ ಹೇಳಿದ್ದಾರೆ. ಇತರರು ತಾವು ಕೇಳಿ ತಿಳಿದಿದ್ದಾಗಿ ಹೇಳಿದ್ದಾರೆ. ತನಿಖಾಧಿಕಾರಿ ಆರೋಪ ಹೊರತುಪಡಿಸಿ ಬೇರಿನ್ನಾವ ಆರೋಪವಿಲ್ಲ. ಹಲ್ಲೆ ನಡೆಸಿದ ಬಗ್ಗೆ ವೈದ್ಯಕೀಯ ದಾಖಲೆಗಳಿಲ್ಲ. ಹೀಗಿದ್ದೂ ಪೇದೆಯನ್ನು ವಜಾಗೊಳಿಸಿರುವ ಕ್ರಮ ಸೂಕ್ತವಾದದ್ದಲ್ಲ ಎಂದು ಅಭಿಪ್ರಾಯಪಟ್ಟಿದೆ.
ಜತೆಗೆ, ವಜಾಗೊಳಿಸಲಾಗಿದ್ದ ಅರ್ಜಿದಾರ ರಾಣಾನನ್ನು ಸೇವೆಗೆ ಮರಳಿ ಸೇರಿಸಿಕೊಳ್ಳುವಂತೆ ಆದೇಶಿಸಿರುವ ಹೈಕೋರ್ಟ್, ಈವರೆಗಿನ ವೇತನವನ್ನು ಬಡ್ಡಿ ಸಹಿತ ಪಾವತಿಸುವಂತೆ ನಿರ್ದೇಶಿಸಿದೆ.
