ಸಾರ್ವಜನಿಕ ಸ್ಥಳದಲ್ಲಿ ಪಾರಿವಾಳಗಳಿಗೆ ಆಹಾರ ನೀಡಿದ್ದ ಬಾಂಬೆಯ ಉದ್ಯಮಿಯೊಬ್ಬರನ್ನು ಇಲ್ಲಿನ ಸ್ಥಳೀಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ತಪ್ಪಿತಸ್ಥರೆಂದು ಆದೇಶಿಸಿದೆ. ಇಂತಹ ಕೃತ್ಯವು ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಉಂಟು ಮಾಡುತ್ತದೆ ಮತ್ತು ಸರ್ಕಾರದ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.
ಅಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಪಾರಿವಾಳಗಳಿಗೆ ಆಹಾರ ನೀಡಿದ 52 ವರ್ಷದ ಉದ್ಯಮಿ ನಿತಿನ್ ಸೇಠ್ ಅವರಿಗೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 223(ಬಿ) ಹಾಗೂ 271 ರ ಅಡಿಯಲ್ಲಿ 5 ಸಾವಿರ ರೂಪಾಯಿ ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.
ಕಳೆದ ಆಗಸ್ಟ್ 1ರಂದು ಉದ್ಯಮಿ ಸೇಠ್ ಅವರು ಹಿಂದುಜಾ ಆಸ್ಪತ್ರೆಯ ಬಳಿ ಪಾರಿವಾಳಗಳಿಗೆ ಆಹಾರ ನೀಡಿದ್ದರು. ಈ ಕುರಿತಂತೆ ಮಾಹಿಮ್ ಠಾಣೆ ಪೊಲೀಸರು ಸೇಠ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಕೋರ್ಟ್, ಆರೋಪಿತ ಕೃತ್ಯವು ಮಾನವ ಜೀವ, ಆರೋಗ್ಯ ಹಾಗೂ ಸುರಕ್ಷತೆಗೆ ಅಪಾಯವನ್ನು ಉಂಟುಮಾಡಿದೆ. ಈ ಮೂಲಕ ಶಿಕ್ಷಾರ್ಹ ಅಪರಾಧ ಎಸಗಿದ್ದೀರಿ ಎಂದು ಹೇಳಿದೆ.
ಮುಂಬೈನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಷೇಧಿಸಲಾಗಿದೆ. ಪಾರಿವಾಳಗಳ ಹಿಕ್ಕೆಯು ಶ್ವಾಸಕೋಶದ ಸಮಸ್ಯೆಗಳಿಗೆ ಕಾರಣವಾಗುವ ಹಿನ್ನೆಲೆಯಲ್ಲಿ ಅವುಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಆಹಾರ ನೀಡುವುದನ್ನು ಸಾರ್ವಜನಿಕ ಆರೋಗ್ಯದ ಕಾರಣ್ಕಕಾಗಿ ನಿಷೇಧಿಸಲಾಗಿದೆ. ಒಂದು ವೇಳೆ ನೀಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಬಾಂಬೆ ಹೈಕೋರ್ಟ್ ಕಳೆದ ಜುಲೈ ನಲ್ಲಿ ಆದೇಶಿಸಿದೆ.
ರಾಜ್ಯದಲ್ಲೂ ಜಾರಿಯಲ್ಲಿದೆ- ಪಾರಿವಾಳಗಳಿಗೆ ಸಾರ್ವಜನಿಕ ಪ್ರದೇಶಗಳಲ್ಲಿ ಆಹಾರ ನೀಡುವ ಸಂಬಂಧ ಕರ್ನಾಟಕ ಸರ್ಕಾರವೂ ನಿಯಮಗಳನ್ನು ಜಾರಿಗೊಳಿಸಿದೆ. ನಿಯಮಗಳ ಪ್ರಕಾರ, ಸಾರ್ವಜನಿಕರಿಗೆ ತೊಂದರೆ ಅಥವಾ ಆರೋಗ್ಯಕ್ಕೆ ಅಪಾಯವೆನಿಸುವ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡಿದರೆ, ದಂಡ ವಿಧಿಸಲು ಅವಕಾಶ ನೀಡಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 271 ಅಡಿಯಲ್ಲಿ ಸಾಂಕ್ರಾಮಿಕ ರೋಗ ಹರಡುವ ನಿರ್ಲಕ್ಷ್ಯಕ್ಕೆ 6 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಪಾರಿವಾಳದ ಹಿಕ್ಕೆಗಳಿಂದ ಉಂಟಾಗುವ ಶ್ವಾಸಕೋಶದ ಸಮಸ್ಯೆಗಳು ಮತ್ತು ಇತರ ಆರೋಗ್ಯ ತೊಂದರೆಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಇನ್ನು ಆಹಾರ ನೀಡುವುದಾದರೆ ನಿಗದಿಪಡಿಸಿದ ಪ್ರದೇಶಗಳಲ್ಲಿ ಮಾತ್ರ ಅನುಮತಿ ಕೊಡಲಾಗುತ್ತದೆ.
