ರಾಜ್ಯ ಸರ್ಕಾರ ಇ-ಹರಾಜು ಮೂಲಕ ಬಿಕರಿ ಮಾಡಲು ಹೊರಟಿದ್ದ 569 ಅಬಕಾರಿ ಲೈಸೆನ್ಸ್ ಗಳನ್ನು ಹರಾಜು ಹಾಕದಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶಿಸಿದೆ.
ಅಬಕಾರಿ ಇಲಾಖೆ ಡಿಸೆಂಬರ್ 19 ರಂದು ಇ ಹರಾಜು ಪ್ರಕ್ರಿಯೆ ಮೂಲಕ ಲೈಸನ್ಸ್ ಗಳನ್ನು ಮಾರಾಟ ಮಾಡಲು ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಹುಬ್ಬಳ್ಳಿಯ ಶಾಂತಾಬಾಯಿ ಎಂಬುವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾ.ಕೆ.ಎಸ್.ಹೇಮಲೇಖಾ ಅವರಿದ್ದ ರಜಾಕಾಲದ ಪೀಠ, ಅಧಿಸೂಚನೆಗೆ ಜನವರಿ 8 ರವರೆಗೆ ತಡೆ ನೀಡಿ, ರಾಜ್ಯ ಸರ್ಕಾರ ಹಾಗೂ ಅಬಕಾರಿ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.
ರಾಜ್ಯ ಸರ್ಕಾರ ಆದಾಯ ಸಂಗ್ರಹ ಹಿನ್ನೆಲೆಯಲ್ಲಿ ಸಾಕಷ್ಟು ಸಮಯದಿಂದ ಬಳಕೆಯಾಗದೆ ನಿಷ್ಕ್ರಿಯವಾಗಿ ಉಳಿದಿರುವ CL-2A (ಚಿಲ್ಲರೆ ಮದ್ಯದ ಅಂಗಡಿ), CL-9A (ಬಾರ್‌ಗಳು ಮತ್ತು ರೆಸ್ಟೋರೆಂಟ್) ಹಾಗೂ CL-11-C (ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್) ಬಾರ್ ಲೈಸೆನ್ಸ್ ಗಳನ್ನು ಹರಾಜು ಮೂಲಕ ಮಾರಾಟ ಮಾಡಲು ಮುಂದಾಗಿದೆ. ಸರ್ಕಾರವು ಹರಾಜಿನ ಮೂಲಕ ಸುಮಾರು 600 ಕೋಟಿ ರೂ.ಗಳ ಆದಾಯ ಸಂಗ್ರಹಿಸುವ ನಿರೀಕ್ಷೆ ಹೊಂದಿದೆ.
