ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುವ ಕೋಣೆಯಲ್ಲಿ ರಹಸ್ಯವಾಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವಿಚಾರವಾಗಿ ಬೆಂಗಳೂರು ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಖಾಸಗಿ ಆಸ್ಪತ್ರೆಯ ನಿರ್ದೇಶಕರು ನೀಡಿದ ದೂರಿನ ಮೇರೆಗೆ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು 30 ವರ್ಷದ ಶುವೇಂದು ಎಂಬಾತನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಇದೇ ಕಳೆದ ಡಿಸೆಂಬರ್ 20 ರಂದು ಮಹಿಳಾ ಸಿಬ್ಬಂದಿ ಬಟ್ಟೆ ಬದಲಿಸುವ ವೇಳೆ ಆರೋಪಿ ಶುವೇಂದು ತನ್ನ ಮೊಬೈಲ್ ಬಳಸಿ ಚಿತ್ರೀಕರಣ ಮಾಡುವಾಗ ಸಿಕ್ಕಿಬಿದ್ದಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ. ಮೊಬೈಲ್ ನಲ್ಲಿ ಚಿತ್ರೀಕರಿಸುವುದನ್ನು ಗಮನಿಸಿದ ನಂತರ ಅಲ್ಲಿನ ಸ್ಟಾಫ್ ನರ್ಸ್ ಆಸ್ಪತ್ರೆಯ ಮುಖ್ಯಸ್ಥರ ಗಮನಕ್ಕೆ ತಂದಿದ್ದಾರೆ.
ಆರೋಪಿ ವಿರುದ್ಧ ಬಿಎನ್ಎಸ್ ಸೆಕ್ಷನ್ 77 ರಂ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಜತೆಗೆ ಆತನ ಮೊಬೈಲ್ ವಶಕ್ಕೆ ಪಡೆದಿದ್ದು, ಈ ಹಿಂದೆಯೂ ಇಂತಹುದೇ ಕೃತ್ಯದಲ್ಲಿ ಭಾಗಿಯಾಗಿದ್ದಾನಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
