ಭಾರತೀಯ ಜನತಾ ಪಕ್ಷಕ್ಕೆ ಕಮಲದ ಚಿಹ್ನೆ ನೀಡಿರುವುದನ್ನು ರದ್ದುಗೊಳಿಸುವಂತೆ ಕೋರಿ ಅಹಿಂಸಾ ಸಮಾಜವಾದಿ ಪಕ್ಷದ ಸಂಸ್ಥಾಪಕ ಟಿ ರಮೇಶ್ ಸಲ್ಲಿಸಿದ್ದ ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.
ಇದೇ ವೇಳೆ ಅರ್ಜಿದಾರರಿಗೆ 10 ಸಾವಿರ ದಂಡ ವಿಧಿಸಿರುವ ನ್ಯಾಯಮೂರ್ತಿ ಎಸ್.ವಿ ಗಂಗಾಪುರ್ವಾಲಾ ಹಾಗೂ ನ್ಯಾಯಮೂರ್ತಿ ಭರತ ಚಕ್ರವರ್ತಿ ಅವರಿದ್ದ ಪೀಠ, ದಂಡದ ಮೊತ್ತವನ್ನು ತಮಿಳುನಾಡು ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸುವಂತೆ ನಿರ್ದೇಶಿಸಿದೆ.
ಅರ್ಜಿದಾರರ ಮನವಿ ಏನಿತ್ತು: ರಾಷ್ಟ್ರೀಯ ಹೂವು ಎಂದು ಪರಿಗಣಿಸಲ್ಪಟ್ಟಿರುವ ಕಮಲವು ಹಿಂದೂ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ ಮತ್ತು ಸಿಖ್ ಧರ್ಮದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಮಲದ ಹೂವನ್ನು ಈ ಧರ್ಮಗಳು ಮಂಗಳಕರ ಮತ್ತು ಪವಿತ್ರವೆಂದು ಪರಿಗಣಿಸಿವೆ. ಇಷ್ಟಲ್ಲದೇ ಕಮಲದ ಹೂವು ಇಡೀ ರಾಷ್ಟ್ರವನ್ನು ಪ್ರತಿನಿಧಿಸುತ್ತದೆ.
ಇಂತಹ ಕಮಲದ ಹೂವಿನ ಚಿನ್ಹೆಯನ್ನು ರಾಜಕೀಯ ಪಕ್ಷವೊಂದಕ್ಕೆ ನೀಡಿರುವುದು ನ್ಯಾಯಸಮ್ಮತವಲ್ಲ. ನಿರ್ದಿಷ್ಟ ಪಕ್ಷಕ್ಕೆ ಕಮಲದ ಚಿಹ್ನೆಯನ್ನು ನೀಡಿರುವುದು ರಾಷ್ಟ್ರೀಯ ಸಮಗ್ರತೆಗೆ ಕಳಂಕ ತಂದಿದೆ ಎಂದು ಅರ್ಜಿದಾರ ರಮೇಶ್ ವಾದಿಸಿದ್ದರು.
ಅಲ್ಲದೇ, ಬಿಜೆಪಿಗೆ ಕಮಲದ ಚಿಹ್ನೆಯನ್ನು ನೀಡಿರುವುದು ಭಾರತದ ರಾಜ್ಯ ಲಾಂಛನ (ಅನುಚಿತ ಬಳಕೆ ನಿಷೇಧ) ಕಾಯ್ದೆ 2005 ರ ಸೆಕ್ಷನ್ 3 ಮತ್ತು 4 ರ ಉಲ್ಲಂಘನೆಯಾಗಿದೆ. ಹಾಗೆಯೇ, ಮತ ಕೇಳುವ ಸಲುವಾಗಿ ಧಾರ್ಮಿಕ ಚಿಹ್ನೆಗಳನ್ನು ಬಳಸಬಾರದು ಎಂಬ ಪ್ರಜಾಪ್ರತಿನಿಧಿ ಕಾಯ್ದೆ 1951 ರ ಸೆಕ್ಷನ್ 123 ರ ನ್ನು ಸಹ ಉಲ್ಲಂಘಿಸುತ್ತದೆ.
ಆದ್ದರಿಂದ, ಬಿಜೆಪಿಗೆ ನೀಡಿರುವ ಕಮಲದ ಚಿಹ್ನೆಯನ್ನು ರದ್ದುಗೊಳಿಸಬೇಕು ಮತ್ತು ಯಾವುದೇ ರಾಜಕೀಯ ಪಕ್ಷಕ್ಕೆ ಈ ಚಿಹ್ನೆಯನ್ನು ನೀಡಬಾರದು ಎಂದು ರಮೇಶ್ ಅರ್ಜಿಯಲ್ಲಿ ಮನವಿ ಮಾಡಿದ್ದರು.
(WP No 31661/2023)
