ಶಿಕ್ಷಕನೋರ್ವ ತನ್ನ ವಿದ್ಯಾರ್ಥಿನಿಯ ಜತೆಗೆ ಸಮ್ಮತಿಯ ಲೈಂಗಿಕ ಸಂಬಂಧ ಹೊಂದುವುದು ದುಷ್ಕೃತ್ಯವೇ ಹೊರತು ಲೈಂಗಿಕ ಕಿರುಕುಳವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಇದೇ ವೇಳೆ 19 ವರ್ಷಗಳ ಹಿಂದೆ ಇದೇ ಕಾರಣಕ್ಕೆ ಉಪನ್ಯಾಸಕನನ್ನು ವಜಾಗೊಳಿಸಿದ್ದ ಮೋತಿಲಾಲ್ ನೆಹರು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಸೇವೆಯಿಂದ ವಜಾಗೊಳಿಸಿದ ಸಂಸ್ಥೆಯ ಕ್ರಮ ಪ್ರಶ್ನಿಸಿ ಉಪನ್ಯಾಸಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಅರ್ಜಿದಾರ ಉಪನ್ಯಾಸಕ ನೈತಿಕ ಮಾನದಂಡಗಳನ್ನು ಪಾಲಿಸದೇ ಇರಬಹುದು. ಆದರೆ ಅವರನ್ನು ಸೇವೆಯಿಂದ ವಜಾಗೊಳಿಸಿರುವುದು ಹೆಚ್ಚಿನ ಪ್ರಮಾಣದ ಶಿಕ್ಷೆಯಾಗಿದೆ ಮತ್ತು ಆಘಾತಕಾರಿಯಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಅಲ್ಲದೇ, ಘಟನೆ ಸಂಬಂಧ ಉಪನ್ಯಾಸಕನ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗಿಲ್ಲ. ಉಪನ್ಯಾಸಕ ಮತ್ತು ವಿದ್ಯಾರ್ಥಿನಿ ನಡುವಿನ ವಿವಾಹ ಪ್ರಸ್ತಾಪ ಉಭಯ ಕುಟುಂಬಗಳ ವಿರೋಧದಿಂದಾಗಿ ಮುರಿದುಬಿದ್ದಿದೆ ಎನ್ನಲಾಗಿದೆ. ಇವುಗಳನ್ನು ಗಮನಿಸಿದರೆ ಒಪ್ಪಿತ ಸಂಬಂಧವಿತ್ತು ಎಂಬುದನ್ನು ತೋರಿಸುತ್ತದೆ. ಇನ್ನು ಉಪನ್ಯಾಸಕನ ಕೃತ್ಯವನ್ನು ದುಷ್ಕೃತ್ಯ ಎನ್ನಬಹುದೇ ಹೊರತು, ಲೈಂಗಿಕ ದೌರ್ಜನ್ಯ ಎನ್ನಲಾಗದು ಎಂದು ಅಭಿಪ್ರಾಯಪಟ್ಟು, ಉಪನ್ಯಾಸಕನನ್ನು ವಜಾಗೊಳಿಸಿದ ಶಿಕ್ಷಣ ಸಂಸ್ಥೆಯ ಆದೇಶವನ್ನು ರದ್ದುಪಡಿಸಿದೆ.
ಅರ್ಜಿದಾರ ಉಪನ್ಯಾಸಕ 1999 ರಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸೇವೆಗೆ ಸೇರ್ಪಡೆಯಾಗಿದ್ದರು. 2000ನೇ ಇಸವಿಯಲ್ಲಿ ಕೋರ್ಸ್ ಪೂರ್ಣಗೊಳಿಸಿದ್ದ ಮಾಜಿ ವಿದ್ಯಾರ್ಥಿನಿ 2003 ರಲ್ಲಿ ಉಪನ್ಯಾಸಕನ ವಿರುದ್ಧ ದೂರು ದಾಖಲಿಸಿದ್ದರು. ದೂರಿನಲ್ಲಿ, ಆರೋಪಿತನ ಉಪನ್ಯಾಸಕ ತನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಪರ್ಕ ಮಾಡಿದ್ದಾರೆ. ಜತೆಗೆ ಭಾವನಾತ್ಮಕವಾಗಿಯೂ ಹಿಂಸಿಸಿದ್ದಾರೆ ಎಂದು ಆರೋಪಿಸಿದ್ದರು.
ಮಾಜಿ ವಿದ್ಯಾರ್ಥಿನಿಯ ದೂರಿನ ಮೇರೆಗೆ ಶಿಕ್ಷಣ ಸಂಸ್ಥೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸಿ, ವಿಚಾರಣೆ ನಡೆಸಿತ್ತು. ಸಮಿತಿ ವಿಚಾರಣೆ ನಡೆಸುವ ವೇಳೆ ಉಪನ್ಯಾಸಕ ತನ್ನ ಹಾಗೂ ವಿದ್ಯಾರ್ಥಿನಿ ನಡುವೆ ಒಪ್ಪಿತ ಸಂಬಂಧವಿತ್ತು ಹಾಗೂ ಆ ಸಂಬಂಧ ಆಕೆ ಕಾಲೇಜು ತೊರೆದ ನಂತರವೂ ಇತ್ತು ಎಂಬುದನ್ನು ಒಪ್ಪಿಕೊಂಡಿದ್ದರು. ಈ ಮೇರೆಗೆ ಶಿಕ್ಷಣ ಸಂಸ್ಥೆಯು ತನ್ನ ಉಪನ್ಯಾಸಕನ ವಿರುದ್ಧ ಶಿಸ್ತು ಕ್ರಮ ಜರುಗಿಸಿ, ಸೇವಯಿಂದ ವಜಾಗೊಳಿಸಿತ್ತು.
