News

ಹೆಂಡತಿಗೆ ಸಾರ್ವಜನಿಕವಾಗಿ ಹೊಡೆಯುವುದು ಐಪಿಸಿ 354 ಅಡಿ ಅಪರಾಧವಲ್ಲ: ಹೈಕೋರ್ಟ್

Share It

ಪತಿ ಸಾರ್ವಜನಿಕವಾಗಿ ಪತ್ನಿಯ ಕಪಾಳಕ್ಕೆ ಹೊಡೆಯುವುದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಅಡಿ ಮಹಿಳೆಯ ಘನತೆಗೆ ಧಕ್ಕೆ ತರುವ ಅಪರಾಧ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್, ಈ ಸೆಕ್ಷನ್ ಅಡಿ ಪತಿ ವಿರುದ್ಧ ವಿಚಾರಣಾ ನ್ಯಾಯಾಲಯ ಕೈಗೊಂಡಿದ್ದ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸಿ ಆದೇಶಿಸಿದೆ.

ಇದೇ ವೇಳೆ, ಪತಿ ಹಲ್ಲೆ ಮಾಡಿದ್ದಲ್ಲಿ ಅದನ್ನು ಐಪಿಸಿ ಸೆಕ್ಷನ್ 323 ಅಡಿ ನೋವುಂಟು ಮಾಡುವ ಅಪರಾಧವಾಗಿ ಪರಿಗಣಿಸಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು ಅದರಂತೆ ಕಾನೂನು ಪ್ರಕ್ರಿಯೆ ಮುಂದುವರೆಸಲು ಸಂತ್ರಸ್ತರಿಗೆ ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ದಂಪತಿ ನಡುವೆ ವಿರಸ ಉಂಟಾಗಿ ಪ್ರತ್ಯೇಕ ವಾಸವಿದ್ದರು. ಪತಿ ವೈವಾಹಿಕ ಸಂಬಂಧ ಪುನರ್ ಸ್ಥಾಪನೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರೆ, ಪತ್ನಿ ವಿವಾಹ ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣಗಳ ವಿಚಾರಣೆಗೆ ಬಂದು ಹೋಗುವ ಸಮಯದಲ್ಲಿ ಪತಿ ತನ್ನ ಕಪಾಳಕ್ಕೆ ಸಾರ್ವಜನಿಕವಾಗಿ ಹೊಡೆದಿದ್ದಾನೆ ಎಂದು ಮಹಿಳೆ ಆರೋಪಿಸಿ, ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್ ಆರೋಪಿ ಪತಿಗೆ ಸಮನ್ಸ್ ಜಾರಿ ಮಾಡಿತ್ತು. ನ್ಯಾಯಾಲಯದ ಸಮನ್ಸ್ ಹಾಗೂ ಪತ್ನಿ ತನ್ನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ದಂಪತಿ ನಡುವೆ ವೈವಾಹಿಕ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇವೆ. ಈ ಸಂದರ್ಭದಲ್ಲಿ ಪತ್ನಿ ತನ್ನ ಗಂಡ ಹೊಡೆದಿದ್ದಾರೆಂದು ಆರೋಪ ಮಾಡಿದ್ದಾರೆ. ದೂರಿನಲ್ಲಿ ಉಲ್ಲೇಖಿಸಲಾದ ಆರೋಪಗಳು ಐಪಿಸಿ ಸೆಕ್ಷನ್ 354 ನಿಬಂಧನೆಯನ್ನು ಅನ್ವಯಿಸಲು ಬರುವುದಿಲ್ಲ. ಹೀಗಾಗಿ ಐಪಿಸಿ ಸೆಕ್ಷನ್ 323 ಅಡಿ ಸ್ವಯಂಪ್ರೇರಣೆಯಿಂದ ನೋವುಂಟು ಮಾಡುವ ಅಪರಾಧ ವ್ಯಾಪ್ತಿಯವಲ್ಲಿ ಈ ಪ್ರಕರಣವನ್ನು ಪರಿಗಣಿಸಬಹುದು ಎಂದು ಅಭಿಪ್ರಾಯಪಟ್ಟಿದೆ. ಇನ್ನು ಹೈಕೋರ್ಟ್ ವಿಚಾರಣೆ ವೇಳೆ ಪತ್ನಿ ಪರ ವಕೀಲರು ಕೂಡ ನ್ಯಾಯಾಲಯದ ಅಭಿಪ್ರಾಯವನ್ನು ಸಮ್ಮತಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಹೈಕೋರ್ಟ್, ಪತಿ ವಿರುದ್ಧ ಐಪಿಸಿ ಸೆಕ್ಷನ್ 354 ಅಡಿ ಆರಂಭಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದುಪಡಿಸಿದೆ. ಉಳಿದಂತೆ ಐಪಿಸಿ ಸೆಕ್ಷನ್ 323 ಅಡಿ ಪ್ರಕ್ರಿಯೆ ಮುಂದುವರೆಸಲು ಸಮ್ಮತಿಸಿದೆ.

ಪ್ರಕರಣದ ಸಂಖ್ಯೆ: CRM(M) No.265/2022)

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.


Share It

You cannot copy content of this page