ಯಾವುದೇ ವ್ಯಕ್ತಿಗೆ ಕೇವಲ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಎಂಬ ಕಾರಣಕ್ಕೆ ಪಾಸ್ಪೋರ್ಟ್ ನಿರಾಕರಿಸಲಾಗದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಕ್ರಿಮಿನಲ್ ಆರೋಪ ಹೊತ್ತಿರುವ ವ್ಯಕ್ತಿ ಪಾಸ್ಪೋರ್ಟ್ ಹೊಂದಿದ್ದಾರೆ ಎಂದಾಕ್ಷಣ ಅವರು ವಿದೇಶಕ್ಕೆ ಹೋಗಲಾರರು. ಅವರು ವಿದೇಶಕ್ಕೆ ಹೋಗಲು ಅನುಮತಿ ನೀಡುವ ಅಥವಾ ತಿರಸ್ಕರಿಸುವ ಅಧಿಕಾರ ನ್ಯಾಯಾಲಯದ ವಿವೇಚನೆಗೆ ಬಿಟ್ಟ ವಿಚಾರವಾಗಿರುತ್ತದೆ. ಹೀಗಾಗಿ ಕ್ರಿಮಿನಲ್ ಆರೋಪ ಹೊತ್ತ ವ್ಯಕ್ತಿಗೆ ಪಾಸ್ಪೋರ್ಟ್ ನೀಡುವುದಿಲ್ಲ ಎಂದು ಹೇಳಲಾಗದು ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಅಲ್ಲದೇ, ಪಾಸ್ಪೋರ್ಟ್ ಕಾಯ್ದೆಯ ಸೆಕ್ಷನ್ 6(2)(ಎಫ್) ಅಪರಾಧ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಗೆ ಪಾಸ್ಪೋರ್ಟ್ ನೀಡುವುದಕ್ಕೆ ಸಂಪೂರ್ಣ ನಿರ್ಬಂಧ ಹೇರುವುದಿಲ್ಲ. ಬದಲಿಗೆ ಸಂಬಂಧಪಟ್ಟ ನ್ಯಾಯಾಲಯ ಪರಿಶೀಲನೆ ಮಾಡಿ ಅನುಮತಿ ಕೊಟ್ಟಲ್ಲಿ ಪಾಸ್ಪೋರ್ಟ್ ನೀಡಲು ಅಡ್ಡಿಯಿಲ್ಲ ಎಂದು ಸುಪ್ರೀಂ ಇತ್ತೀಚಿನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ನಮ್ಮ ಸಂವಿಧಾನವು ಪ್ರತಿ ವ್ಯಕ್ತಿಗೂ ಸಂಚರಿಸುವ, ಜೀವನೋಪಾಯ ಅವಕಾಶಗಳನ್ನು ಅನ್ವೇಷಿಸುವ ಸ್ವಾತಂತ್ರ್ಯವನ್ನು ನೀಡಿದೆ. ಸಂವಿಧಾನದ ವಿಧಿ 21 ರ ಮೂಲಭೂತ ಹಕ್ಕುಗಳ ಅಡಿಯಲ್ಲಿ ಈ ಸ್ವಾತಂತ್ರ್ಯ ಕಲ್ಪಿಸಲಾಗಿದೆ. ಇಂತಹ ಸ್ವಾತಂತ್ರ್ಯವನ್ನು ನ್ಯಾಯ, ಭದ್ರತೆ ಅಥವಾ ಸಾರ್ವಜನಿಕ ಶಾಂತಿ ಹಿತಾಸಕ್ತಿ ಅಡಿಯಲ್ಲಿ ನಿಯಂತ್ರಿಸಬಹುದೇ ಹೊರತು ಎಲ್ಲ ಸಂದರ್ಭದಲ್ಲೂ ಸಂಪೂರ್ಣವಾಗಿ ನಿರ್ಬಂಧಿಸಲಾಗದು. ಹಾಗೆಯೇ ಇಂತಹ ನಿರ್ಬಂಧಗಳು ಅವಶ್ಯ ಪ್ರಮಾಣದಲ್ಲಿ ಮಾತ್ರ ಇರಬೇಕು ಎಂದು ನ್ಯಾಯಾಲಯ ಹೇಳಿದೆ.
ಇದೇ ವೇಳೆ ಪಾಸ್ಪೋರ್ಟ್ ನವೀಕರಿಸಲು ನಿರಾಕರಿಸಿದ್ದ ಪಾಸ್ಪೋರ್ಟ್ ಪ್ರಾಧಿಕಾರದ ಕ್ರಮ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರನಿಗೆ ರಿಲೀಫ್ ನೀಡಿರುವ ಸುಪ್ರೀಂಕೋರ್ಟ್, ಮುಂದಿನ 10 ವರ್ಷಗಳ ಅವಧಿಗೆ ಪಾಸ್ಪೋರ್ಟ್ ನವೀಕರಿಸಿಕೊಡುವಂತೆ ಪಾಸ್ಪೋರ್ಟ್ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ. ಹಾಗೆಯೇ, ಅರ್ಜಿದಾರ ವಿದೇಶಕ್ಕೆ ಪ್ರಯಾಣಿಸುವುದಿದ್ದರೆ ವಿಚಾರಣಾ ನ್ಯಾಯಾಲಯದ ಅನುಮತಿ ಪಡೆಯಬೇಕು ಮತ್ತು ಷರತ್ತುಗಳನ್ನು ಪಾಲಿಸಬೇಕು ಎಂದು ಸೂಚಿಸಿದೆ.
ಪ್ರಕರಣದ ಸಂಖ್ಯೆ: 2025 INSC 1476
ಲೇಖನ: ಮಂಜೇಗೌಡ ಕೆ,ಜಿ. ವಕೀಲರು, ಎಂಜಿ ಲೀಗಲ್, ಬೆಂಗಳೂರು.
