Law

ಪತಿ ಕೇಸ್ ದಾಖಲಿಸಿದರೆ ಪತ್ನಿಯ ಕೋರ್ಟ್ ವೆಚ್ಚವನ್ನೂ ಭರಿಸಬೇಕು: ಹೈಕೋರ್ಟ್ ಆದೇಶ

Share It

ಪತಿಯ ಕಾರಣದಿಂದಾಗಿ ಪತ್ನಿಯು ತನ್ನ ವೈವಾಹಿಕ ಮನೆಯಿಂದ ಹೊರಬಂದಾಗ ಮತ್ತು ಆಕೆಯ ವಿರುದ್ಧ ವೈವಾಹಿಕ ಪ್ರಕರಣ ದಾಖಲಿಸಿದಾಗ ಹೆಂಡತಿಯ ದಾವೆ ವೆಚ್ಚವನ್ನು ಆಕೆಯೇ ಭರಿಸಬೇಕು ಎಂದು ಒತ್ತಾಯಿಸುವಂತಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಹೇಳಿದೆ. ಅಲ್ಲದೇ, ಪ್ರತಿ ತಿಂಗಳೂ ಪತ್ನಿಯ ದಾವೆ ವೆಚ್ಚವನ್ನು ಪತಿಯೇ ಭರಿಸುವಂತೆ ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶ ಸರಿ ಇದೆ ಎಂದು ತೀರ್ಪು ನೀಡಿದೆ.

ವಿವಾಹ ವಿಚ್ಛೇದನ ಕೋರಿ ಪತಿ ಸಲ್ಲಿಸಿದ್ದ ಪ್ರಕರಣದಲ್ಲಿ ಕೇಸ್ ಮುನ್ನಡೆಸಲು ಪತ್ನಿಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ ದಾವೆ ವೆಚ್ಚ ಪಾವತಿಸಲು ಸೂಚಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿಸ್ವರೂಪ್ ಚೌಧರಿ ಅವರಿದ್ದ ಪೀಠ, ಪತ್ನಿಯ ದಾವೆ ವೆಚ್ಚವನ್ನು ಪತಿಯೇ ಭರಿಸುವಂತೆ ಆದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಗಂಡನ ಮನೆ ತೊರೆಯುವಂತಹ ಪರಿಸ್ಥಿತಿ ನಿರ್ಮಾಣವಾದ ಸಂದರ್ಭಗಳಲ್ಲಿ ಪತ್ನಿ ವೈವಾಹಿಕ ಮನೆ ತೊರೆದು ಹೊರಬಂದಾಗ ಆಕೆ ಮಾನಸಿಕ ಅಸ್ಥಿರತೆ ಅನುಭವಿಸುತ್ತಾಳೆ. ಕೆಲವೊಮ್ಮೆ ಖಿನ್ನತೆಗೂ ಒಳಗಾಗಿರುತ್ತಾಳೆ. ಇಂತಹ ಸ್ಥಿತಿಯಲ್ಲಿ ಆಕೆ ಜೀವನೋಪಾಯಕ್ಕಾಗಿ ಅನಿವಾರ್ಯ ಎಂಬಂತೆ ತನ್ನ ಪೋಷಕರನ್ನು ಅವಲಂಬಿಸಬೇಕಾಗುತ್ತದೆ. ಕೆಲವೊಮ್ಮೆ ಬದುಕಲು ಯಾವುದಾದರೊಂದು ಕೆಲಸ ಮಾಡಬೇಕಾದ ಪರಿಸ್ಥಿತಿ ಉದ್ಭವಿಸಿರುತ್ತದೆ.

ಇಂತಹ ಸಂದರ್ಭಗಳಲ್ಲಿ ದಾವೆ ವೆಚ್ಚವನ್ನೂ ಪತ್ನಿಗೆ ಭರಿಸುವಂತೆ ಒತ್ತಾಯಿಸುವುದು ನ್ಯಾಯಸಮ್ಮತವಲ್ಲ. ಇನ್ನು ವೈವಾಹಿಕ ಮನೆ ತೊರೆದ ಬಳಿಕ ಆಕೆ ಜೀವನೋಪಾಯಕ್ಕಾಗಿ ಕೆಲಸ ಮಾಡಬಹುದಾಗಿದ್ದರೂ ಆ ಸಂಪಾದನೆ ಆಹಾರ, ಬಟ್ಟೆ, ವಸತಿ, ವೈದ್ಯಕೀಯ ವೆಚ್ಚ ಸೇರಿದಂತೆ ಹಲವು ಖರ್ಚುಗಳಿರುತ್ತವೆ. ಆದ್ದರಿಂದ ಪತ್ನಿ ಹೂಡಿಲ್ಲದ ಮತ್ತು ಆಕೆಯ ಗಂಡ ದಾಖಲಿಸಿರುವ ಪ್ರಕರಣದಲ್ಲಿ ಆತನೇ ದಾವೆ ವೆಚ್ಚ ಪಾವತಿಸಬೇಕು ಎಂದು ಸೂಚಿಸಿದೆ.

ಇನ್ನು ಜೀವನಾಂಶಕ್ಕೆ ಆದೇಶವಾಗಿದ್ದರೂ ಅದು ಜೀವನ ನಡೆಸಲಿಕ್ಕಷ್ಟೇ ಸರಿಹೋಗುತ್ತದೆ. ಇಂತಹ ಸಂದರ್ಭದಲ್ಲಿ ಮಹಿಳೆಯ ಘನತೆ ರಕ್ಷಿಸಬೇಕಿದ್ದು, ನೊಂದ ಮಹಿಳೆ ಮತ್ತಷ್ಟು ಕಷ್ಟ ಎದುರಿಸುವ ಸ್ಥಿತಿ ಉಂಟಾಗದಂತೆ ನೋಡಿಕೊಳ್ಳಬೇಕು. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24ರಡಿ ಅರ್ಜಿ ಸಲ್ಲಿಸಿದ ತಕ್ಷಣವೇ ವೆಚ್ಚ ಪಾವತಿಸಲು ಆದೇಶಿಸಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ

ಸೆಕ್ಷನ್ 24: ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24 ವೈವಾಹಿಕ ಪ್ರಕರಣಗಳು ದಾಖಲಾದ ಸಂದರ್ಭದಲ್ಲಿ ಎದುರುದಾರರಿಗೆ ಸಾಕಷ್ಟು ಹಣಕಾಸು ಸೌಲಭ್ಯವಿಲ್ಲ ಅಥವಾ ಆರ್ಥಿಕ ಸ್ವಾವಲಂಬನೆ ಇಲ್ಲ ಎನ್ನಿಸಿದರೆ ವ್ಯಾಜ್ಯ ಮುನ್ನಡೆಸಲು ಎದುರುದಾರರಿಗೆ ದಾವೆ ವೆಚ್ಚ ಪಾವತಿಸುವ ಕುರಿತು ಹೇಳುತ್ತದೆ. ಅದರಂತೆ ಎದುರುದಾರರು ಆರ್ಥಿಕ ಸಂಕಷ್ಟದಲ್ಲಿದ್ದಾಗ ಈ ನಿಯಮದ ಅಡಿ ದಾವೆ ವೆಚ್ಚ ಕೋರಬಹುದಾಗಿದೆ.

ಪ್ರಕರಣದ ಸಂಖ್ಯೆ: CO 1071 of 2022

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.


Share It

You cannot copy content of this page