ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಬಿ.ಇಡಿ ಸಂಸ್ಥೆಗಳು ಇನ್ನು ಮುಂದೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ನ್ಯಾಕ್) ಜೊತೆಗಿನ ಎಲ್ಲಾ ಸಂವಹನಗಳನ್ನು ಕನ್ನಡದಲ್ಲೇ ನಡೆಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಈ ಮೊದಲು ಬಹುತೇಕ ಕಾಲೇಜುಗಳು ನ್ಯಾಕ್ ಮಾನ್ಯತೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಆಂಗ್ಲ ಭಾಷೆಯಲ್ಲಿಯೇ ನಡೆಸುತ್ತಿದ್ದವು. ಇದನ್ನು ಗಮನಿಸಿದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತೆ ಎನ್. ಮಂಜುಶ್ರೀ ಈ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪದವಿ ಹಾಗೂ ಬಿ.ಇಡಿ ಕಾಲೇಜುಗಳು ಕಡ್ಡಾಯವಾಗಿ ಕನ್ನಡ ಬಳಸಬೇಕು. ಒಂದು ವೇಳೆ ನ್ಯಾಕ್ ಮಂಡಳಿಯು ನಿರ್ದಿಷ್ಟವಾಗಿ ಇಂಗ್ಲಿಷ್‌ನಲ್ಲಿ ವಿವರಗಳನ್ನು ಕೇಳಿದರೆ ಮಾತ್ರ ದಾಖಲೆಗಳನ್ನು ಭಾಷಾಂತರಿಸಿ ನೀಡಲು ಅವಕಾಶವಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇಲಾಖೆಯ ನಡೆ ಸ್ವಾಗತಾರ್ಹ:
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸೂಚನೆಯ ಮೇರೆಗೆ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಖಾಸಗಿ, ಅನುದಾನಿತ ಹಾಗೂ ಬಿ.ಎಡ್ ಕಾಲೇಜುಗಳಲ್ಲಿ ನ್ಯಾಕ್‌ನ ಪತ್ರ ವ್ಯವಹಾರಗಳು ಕನ್ನಡದಲ್ಲೇ ನಡೆಸಲಿರುವ ಕಾಲೇಜು ಶಿಕ್ಷಣ ಇಲಾಖೆಯ ತೀರ್ಮಾನವು ಸ್ವಾಗತಾರ್ಹವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹರ್ಷವ್ಯಕ್ತಪಡಿಸಿದ್ದಾರೆ.
