News

ವಿದ್ಯಾರ್ಥಿ ಒಳಗೆ ಸೇರಿಸದ ಖಾಸಗಿ ಶಾಲೆಗೆ ಲಕ್ಷ ರೂ ದಂಡ ವಿಧಿಸಿದ ಹೈಕೋರ್ಟ್

Share It

ನ್ಯಾಯಾಲಯದ ಆದೇಶದ ಹೊರತಾಗಿಯೂ 9ನೇ ತರಗತಿ ವಿದ್ಯಾರ್ಥಿನಿಯನ್ನು ಶಾಲೆಗೆ ಸೇರಿಸದ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಗೆ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.

ವಿದ್ಯಾರ್ಥಿಗಳು ಶಾಲಾ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂಬ ಕಾರಣಕ್ಕೆ 9ನೇ ತರಗತಿಯ ಸುಮಾರು 50 ವಿದ್ಯಾರ್ಥಿಗಳಿಗೆ ತರಗತಿಗೆ ಹಾಜರಾಗಲು ಅವಕಾಶ ನೀಡದ ಬೆಂಗಳೂರಿನ ಮಲ್ಲೇಶ್ವರದ ಖಾಸಗಿ ಶಾಲೆಗೆ ದಂಡ ವಿಧಿಸಿದೆ.

ದಂಡದ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವಂತೆ ಆದೇಶಿಸಿ ಅರ್ಜಿ ಇತ್ಯಾರ್ಥಪಡಿಸಿರುವ ಹೈಕೋರ್ಟ್ ಇನ್ನು ಮುಂದೆ ಪ್ರತಿವಾದಿ ಶಿಕ್ಷಣ ಸಂಸ್ಥೆ ಸೇರಿದಂತೆ ಯಾವುದೇ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಬಾರದು ಎಂದು ಎಚ್ಚರಿಕೆ ನೀಡಿದೆ.

ಶಾಲೆಯ ವಿರುದ್ಧ ವಿದ್ಯಾರ್ಥಿಯ ಪೋಷಕರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಶಾಲೆ ವಿದ್ಯಾರ್ಥಿಗಳು ಶಾಲಾ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂಬ ಕಾರಣಕ್ಕೆ 10 ಸಾವಿರ ದಂಡ ಹಾಗೂ ಮುಚ್ಚಳಿಕೆ ಬರೆದುಕೊಡುವಂತೆ ಬೇಡಿಕೆ ಇಡುವುದು ಸಮರ್ಪಕ ಹೌದೋ ಅಲ್ಲವು ಎಂಬುದು ಒತ್ತಟ್ಟಿಗಿರಲಿ, ಆದರೆ ವಿದ್ಯಾರ್ಥಿಗಳಿಗೆ ತರಗತಿಗೆ ಪ್ರವೇಶ ಕೊಡದಿದ್ದರೆ ಹೇಗೆ ಎಂದು ಕಳವಳ ವ್ಯಕ್ತಪಡಿಸಿದೆ.

ಹೈಕೋಟ್೯ ಏಕಸದಸ್ಯ ಪೀಠ, ಶಾಲೆಯ ಆದೇಶಕ್ಕೆ ತಡೆ ನೀಡಿ ವಿದ್ಯಾರ್ಥಿನಿಗೆ ತರಗತಿಗೆ ಪ್ರವೇಶಕ್ಕೆ ಅವಕಾಶ ನೀಡುವಂತೆ ನಿರ್ದೇಶಿಸಿತ್ತು. ಆದರೆ, ನ್ಯಾಯಾಲಯದ ಆದೇಶದ ಹೊರತಾಗಿಯೂ ಶಾಲಾ ಆಡಳಿತ ವಿದ್ಯಾರ್ಥಿನಿಗೆ ತರಗತಿಗೆ ಪ್ರವೇಶ ಕೊಟ್ಟಿರಲಿಲ್ಲ. ಶಾಲೆಯ ಈ ಕ್ರಮ ಆಕ್ಷೇಪಿಸಿ ವಿದ್ಯಾರ್ಥಿನಿಯ ಪೋಷಕರು ಹೈಕೋಟ್೯ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ಇದೇ ವೇಳೆ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಎರಡೂ ಕಡೆ ವಾದ ಆಲಿಸಿದ ನ್ಯಾಯಾಲಯ ಪ್ರತಿವಾದಿ ಶಿಕ್ಷಣ ಸಂಸ್ಥೆಗೆ ದಂಡ ವಿಧಿಸಿದೆ. ಅಲ್ಲದೇ 9 ಮತ್ತು 10ನೇ ತರಗತಿ ಶಿಕ್ಷಣದ ಪ್ರಮುಖ ಘಟ್ಟವಾಗಿದೆ, ಪ್ರತಿವಾದಿಯಾಗಿರುವ ಶಿಕ್ಷಣ ಸಂಸ್ಥೆ ಮಾತ್ರವಲ್ಲದೆ, ಇತರೆ ಯಾವುದೇ ಶಾಲೆಗಳು ಮಕ್ಕಳ ಭವಿಷ್ಯದ ಜೊತೆ ಆಟವಾಡಬಾರದು ಎಂದು ತಾಕೀತು ಮಾಡಿದೆ.


Share It

You cannot copy content of this page