News

ನಿಯಮ ಬಾಹಿರವಾಗಿ ಮನೆ ತೆರವು: ₹15 ಲಕ್ಷ ಪರಿಹಾರ ನೀಡಲು ಹೈಕೋರ್ಟ್ ಆದೇಶ

Share It

ಮಹಿಳೆಯೊಬ್ಬರ ಮನೆಯನ್ನು ಅಕ್ರಮವಾಗಿ ತೆರವುಗೊಳಿಸಿದ್ದ ಬಿಬಿಎಂಪಿಗೆ ಚಾಟಿ ಬೀಸಿರುವ ಹೈಕೋರ್ಟ್‌, ಸಂಕಷ್ಟ ಎದುರಿಸಿದ ಮಹಿಳೆಗೆ 15 ಲಕ್ಷ ರೂಪಾಯಿ ಪರಿಹಾರ ಪಾವತಿಸಿಸಲು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಗೆ ಆದೇಶಿಸಿದೆ.

ಬೆಂಗಳೂರಿನ ಕೆ.ಆರ್‌. ಪುರಂ ಹೋಬಳಿಯ ದೊಡ್ಡನೆಕ್ಕುಂದಿಯ ನಾರಾಯಣರೆಡ್ಡಿ ಬಡಾವಣೆಯ ನಿವಾಸಿ ಕವಿತಾ ಪೊಡ್ವಾಲ್‌ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ.

ಪೀಠ ತನ್ನ 70 ಪುಟಗಳ ತೀರ್ಪಿನಲ್ಲಿ, ಅರ್ಜಿದಾರರಿಗೆ ನೋಟಿಸ್‌ ನೀಡದೆ ಮನೆ ತೆರವುಗೊಳಿಸಿರುವುದು ಅಕ್ರಮ ಹಾಗೂ ಕಾನೂನು ಬಾಹಿರ. ಅರ್ಜಿದಾರರ ಮನೆಯಲ್ಲಿನ ವಸ್ತುಗಳಿಗೆ ಹಾನಿ ಆಗಿರುವುದರಿಂದ ಪಾಲಿಕೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಬಿಬಿಎಂಪಿ ಮುಖ್ಯ ಆಯುಕ್ತರು ಆ 10 ಲಕ್ಷ ರೂ.ಗಳನ್ನು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ, ಅವರಿಂದ ವಸೂಲು ಮಾಡಿಕೊಳ್ಳಬೇಕು. ಅಲ್ಲದೆ, ಪಾಲಿಕೆಯ ಕಾನೂನುಬಾಹಿರ ಕೃತ್ಯದಿಂದ ಅರ್ಜಿದಾರರಿಗೆ ಆಗಿರುವ ಮಾನಸಿಕ ಆಘಾತಕ್ಕೆ 5 ಲಕ್ಷ ರೂಪಾಯಿ ಪರಿಹಾರ ಪಾವತಿಸಬೇಕು ಎಂದು ಆದೇಶಿಸಿದೆ.

ಅಲ್ಲದೇ, ಮನೆ ತೆರವು ಮಾಡಿರುವುದಕ್ಕೆ ಕಾರಣವನ್ನು ಪತ್ತೆ ಹಚ್ಚಿ 45 ದಿನಗಳಲ್ಲಿ ವರದಿಯನ್ನು ಸಲ್ಲಿಸಬೇಕು. ಅರ್ಜಿದಾರರು ಮೊದಲು ಮನೆ ಇದ್ದ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುವವರೆಗೆ 2016ರ ಏಪ್ರಿಲ್‌ 25ರಿಂದ ಅನ್ವಯವಾಗುವಂತೆ ಪ್ರತಿ ತಿಂಗಳಿಗೆ 10 ಸಾವಿರ ರೂಪಾಯಿಯಂತೆ ಪರಿಹಾರ ಪಾವತಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ದಾಖಲೆಗಳನ್ನು ಪರಿಶೀಲಿಸಿದರೆ ಬಿಬಿಎಂಪಿ ಅಧಿಕಾರಿಗಳು ಕೆಎಂಸಿ ಕಾಯ್ದೆ ಅನ್ವಯ ಅರ್ಜಿದಾರರಿಗೆ ನೋಟಿಸ್ ತಲುಪಿಸಿಲ್ಲ. ಹಾಗಾಗಿ ಅಧಿಕಾರಿಗಳ ಮನೆ ತೆರವು ಕಾನೂನು ಬಾಹಿರ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಅಷ್ಟೇ ಅಲ್ಲದೆ, ಕೋರ್ಟ್‌ ಇಂತಹ ಪ್ರಕರಣಗಳಲ್ಲಿ ಪಾಲಿಕೆ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಹಲವು ನಿರ್ದೇಶನಗಳನ್ನು ನೀಡಿದೆ.

  • ಅಕ್ರಮ ಕಟ್ಟಡಗಳ ಬಗ್ಗೆ ದೂರು ಬಂದಾಗ ಬಿಬಿಎಂಪಿ ಅಧಿಕಾರಿಗಳು ಏಕಾಏಕಿ ನೋಟಿಸ್‌ ನೀಡಬಾರದು.
  • ನೋಟಿಸ್‌ ನೀಡುವ ಮುನ್ನ ಸ್ಥಳ ಪರಿಶೀಲನೆ ನಡೆಸಬೇಕು.
  • ನಕ್ಷೆ ಮಂಜೂರಾಗಿದೆಯೇ ಇಲ್ಲವೇ ಎಂಬುದರ ಕುರಿತಂತೆ ಖಚಿತಪಡಿಸಿಕೊಳ್ಳಬೇಕು ಹಾಗೂ ಮಂಜೂರಾದ ನಕ್ಷೆಯಲ್ಲಿ ಯಾವುದಾದರೂ ಉಲ್ಲಂಘನೆಗಳು ಆಗಿವೆಯೇ ಎಂಬುದನ್ನು ಪರಿಶೀಲಿಸಬೇಕು.
  • ಅಕ್ಕ ಪಕ್ಕ ಜಾಗ ಬಿಡುವುದು, ಕಟ್ಟಡದ ಎತ್ತರ ಮತ್ತಿತರ ನಿಯಮ ಪಾಲಿಸಲಾಗಿದೆಯೇ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು.
  • ಯಾವ ನಿಯಮಗಳು ಉಲ್ಲಂಘನೆಯಾಗಿದೆ ಎಂಬುದನ್ನು ಪಟ್ಟಿ ಮಾಡಬೇಕು.
  • ನಿರ್ದಿಷ್ಟ ಉಲ್ಲಂಘನೆಗಳು ಕಂಡು ಬಂದರೆ ಮಾತ್ರ ನೋಟಿಸ್‌ ನೀಡಿ, ಕಾನೂನು ಪ್ರಕಾರ ಮುಂದಿನ ಕ್ರಮ ಜರುಗಿಸತಕ್ಕದ್ದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರು ಬೆಂಗಳೂರು ನಗರದ ಪೂರ್ವ ತಾಲೂಕಿನ ಕೆ.ಆರ್‌.ಪುರ ಹೋಬಳಿಯ ದೊಡ್ಡನೆಕುಂದಿಯ ನಾರಾಯಣರೆಡ್ಡಿ ಬಡಾವಣೆಯಲ್ಲಿ ಸ್ವಂತ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದರು. ಆದರೆ, ಅವರು ಅಕ್ರಮವಾಗಿ ಮನೆಯನ್ನು ನಿರ್ಮಾಣ ಮಾಡಿದ್ದಾರೆಂಬ ದೂರು ಬಂದಿತ್ತು. ನಿಯಮದಂತೆ ಬಿಬಿಎಂಪಿ ಅವರಿಗೆ ನೋಟಿಸ್‌ ನೀಡಿ, ಅವರ ಉತ್ತರ ಪಡೆದು ಆನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಆದರೆ ತಮಗೆ ಯಾವುದೇ ನೋಟಿಸ್‌ ನೀಡದೆ ಏಕಾಏಕಿ ಮನೆ ತೆರವುಗೊಳಿಸಲಾಗಿದೆ ಎಂದು ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.

Case No: WRIT PETITION NO. 20056 OF 2019 (LB-BMP)

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.


Share It

You cannot copy content of this page