ಒಂದು ವರ್ಷಕ್ಕಿಂತ ಹೆಚ್ಚು ಹಾಗೂ ಮೂರು ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬಹುದಾದ ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯಗಳು 3 ವರ್ಷಗಳ ಒಳಗೆ ಕಾಗ್ನಿಜೆನ್ಸ್ ತೆಗೆದುಕೊಳ್ಳಬೇಕು ಎಂಬ ನಿಯಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಅಲ್ಲದೇ, ಪತ್ರಕರ್ತರೊಬ್ಬರ ವಿರುದ್ಧದ ಮಾನಹಾನಿ ಪ್ರಕರಣದಲ್ಲಿ 7 ವರ್ಷಗಳ ಬಳಿಕ ಕಾಗ್ನಿಜೆನ್ಸ್ ತೆಗೆದುಕೊಂಡು ವಿಚಾರಣೆ ನಡೆಸಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಲಯದ ಆದೇಶವನ್ನು ಇದೇ ನಿಯಮದ ಆಧಾರದಲ್ಲಿ ರದ್ದುಪಡಿಸಿ ತೀರ್ಪು ನೀಡಿದೆ.
ಮಾನಹಾನಿ ಆರೋಪ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಕರಾವಳಿಯ ಭಾಗದ ಪಾಕ್ಷಿಕ ಪಟ್ಟಾಂಗ ಪತ್ರಿಕೆಯ ಸಂಪಾದಕ ಆಂಡ್ಯೂಪೌಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ವಿಚಾರಣಾ ನ್ಯಾಯಾಲಯ ದೂರು ದಾಖಲಾದ ಸುಮಾರು 7 ವರ್ಷಗಳ ಬಳಿಕ ಕಾಗ್ನಿಜೆನ್ಸ್ (ಆರೋಪ ಪರಿಗಣನೆ) ತೆಗೆದುಕೊಂಡಿದೆ. ಇದು ಸಿಆರ್ಪಿಸಿ ಸೆಕ್ಷನ್ 468 ಅಡಿ ಸಮ್ಮತವಲ್ಲ. ಸಿಆರ್ಪಿಸಿ ಸೆಕ್ಷನ್ 468, ಘಟಿಸಿದೆ ಎನ್ನಲಾದ ಅಪರಾಧವು ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆಗೆ ಗುರಿಪಡಿಸುವಂತಿದ್ದರೆ ಹಾಗೂ 3 ವರ್ಷಗಳನ್ನು ಮೀರದಿದ್ದರೆ ನ್ಯಾಯಾಲಯವು 3 ವರ್ಷಗಳ ಒಳಗೆ ಕಾಗ್ನಿಜೆನ್ಸ್ ತೆಗೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸುತ್ತದೆ.
ಆದರೆ, ಈ ಪ್ರಕರಣದಲ್ಲಿ ದೂರುದಾರರು, 2001ರ ಏಪ್ರಿಲ್ 21ರಂದು ಐಪಿಸಿ ಸೆಕ್ಷನ್ 500, 501, 502 ರ ಅಡಿಯಲ್ಲಿ ಮಾನಹಾನಿ ಆರೋಪದಡಿ ದೂರು ದಾಖಲಿಸಿದ್ದಾರೆ. ಆದರೆ ನ್ಯಾಯಾಲಯ 2008ರ ಆಗಸ್ಟ್ 12ರಂದು ಕಾಗ್ನಿಜೆನ್ಸ್ ತೆಗೆದುಕೊಂಡಿದೆ. ಈ ರೀತಿ ಅವಧಿ ಮೀರಿದ ನಂತರ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಳ್ಳುವುದು ಕಾನೂನು ಸಮ್ಮತವಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ವಿವರಿಸಿದೆ.
ಪ್ರಕರಣದ ಹಿನ್ನೆಲೆ: 1998 ರಲ್ಲಿ ಪಟ್ಟಾಂಗ ಪತ್ರಿಕೆಯು ತಮ್ಮ ವಿರುದ್ಧ ಮಾನಹಾನಿ ಲೇಖನ ಪ್ರಕಟಿಸಿದೆ ಎಂದು ಮದರಸಾ ಒಂದರ ಶಿಕ್ಷಕರಾದ ಜಿ ಇಸ್ಮಾಯಿಲ್ ಮುಸ್ಲಿಯಾರ್ ಆರೋಪಿಸಿ 2001 ರಲ್ಲಿ ಕೇಸ್ ದಾಖಲಿಸಿದ್ದರು. ದೂರಿನಲ್ಲಿ ಸುಸಂಸ್ಕೃತ ಕುಟುಂಬದ ವ್ಯಕ್ತಿಯಾಗಿದ್ದು, ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಪತ್ರಿಕೆ ತನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನ ಹೊರಿಸಿ ಲೇಖನ ಪ್ರಕಟಿಸಿ ಮಾನಹಾನಿ ಉಂಟುಮಾಡಿದೆ ಎಂದು ಆರೋಪಿಸಿದ್ದರು.
ಅಲ್ಲದೇ, ಪತ್ರಿಕೆಯು ಪ್ರಕಟಿಸಿದ್ದ ಮಾನಹಾನಿ ಪ್ರತಿಭಟಿಸಿ ತಾವು ಪತ್ರಿಕೆ ಸಂಪಾದಕರಿಗೆ ಪತ್ರ ಬರೆದ ನಂತರವೂ ಮತ್ತೆ ಮತ್ತೆ ಮಾನಹಾನಿ ಲೇಖನಗಳನ್ನು ಪ್ರಕಟಿಸಿದರು. ಪತ್ರಿಕೆ ವಿರುದ್ಧ ಕ್ರಮ ಜರುಗಿಸುವಂತೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ದೂರು ನೀಡಿದ ನಂತರವೂ ಅದನ್ನೇ ಮುಂದುವರೆಸಿದರು. ಹೀಗಾಗಿ ತಡವಾಗಿ 2001ರಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 2ನೇ ಜೆಎಮ್ಎಫ್ಸಿ ಕೋರ್ಟ್ 2016 ರಲ್ಲಿ ಶಿಕ್ಷೆ ವಿಧಿಸಿತ್ತು. ಶಿಕ್ಷೆ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ದಕ್ಷಿಣ ಕನ್ನಡದ 4ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಕೂಡ 2017ರಲ್ಲಿ ಶಿಕ್ಷೆ ವಿಧಿಸಿದ್ದ ಕ್ರಮ ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
Case no: CRL.R.P No.2/2018
ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.
