ಲೇಖನ: ರೇಣುಕಾ ದೇಸಾಯಿ,ನಿವೃತ್ತ ಅಧಿಕಾರಿ ಭಾರತೀಯ ಸ್ಟೇಟ್ ಬ್ಯಾಂಕ್, 9535147455
ಚರಾಚರ ಜಗತ್ತಿನ ಪ್ರಾಣಿ ಪಕ್ಷಿಗಳಿಂದ ಹಿಡಿದು, ಗಿಡ,ಮರಗಳಾದಿಯಾಗಿ ಎಲ್ಲಾ ಜೀವಿ, ವಸ್ತುಗಳಿಗೂ ಶಕ್ತಿಯನ್ನು ಕೊಟ್ಟು ಕಾಪಾಡುವ ಸೂರ್ಯನಾರಾಯಣನು, ಲೋಕದ ಕತ್ತಲನ್ನು ಓಡಿಸುವ ಸ್ವಾಮಿಯೂ ಆಗಿದ್ದಾನೆ. ಇಂದು ಅವನು ತನ್ನ ಚಲನೆಯ ಪಥವನ್ನು ಬದಲಿಸಿ, ಮಕರ ರಾಶಿಗೆ ಪ್ರವೇಶಪಡೆದ ಉತ್ತರಾಯಣದ ಶುಭಕಾಲದಲ್ಲಿ ಬರುವ ಈ ಸುಗ್ಗಿ ಹಬ್ಬವು ಎಲ್ಲರಿಗೂ ಹೊಸ ಚೈತನ್ಯ ನೀಡಿದೆ.
ಇದು ಬರಿಯ ಖಗೋಳದ ಹಬ್ಬವಲ್ಲ, ಭೂಮಿಯ ಹಬ್ಬ. ಮಾನವನ ಶ್ರಮ ಮತ್ತು ಪ್ರಕೃತಿಯ ಲಯಗಳ ನಡುವಿನ ನಿಕಟ ಸಂಬಂಧವನ್ನು ನಮಗೆ ನೆನಪಿಸುತ್ತದೆ. ಈ ಹಬ್ಬವು ಕೃಷಿ, ಶ್ರಮಿಕರು, ರೈತರು ಮತ್ತು ಗ್ರಾಮೀಣ ಜೀವನದ ಘನತೆಯನ್ನು ಗಾಢವಾಗಿ ಬೆಸೆದಿರುವ ಹಬ್ಬವಾಗಿದೆ. ಸುಗ್ಗಿಯ ಕಾಲದ ಹೊಸ್ತಿಲಲ್ಲೇ ಸಂಕ್ರಾಂತಿ ಹಬ್ಬದಾಚರಣೆ ರೈತನಿಗೆ ವಿಶೇಷ. ರೈತರು ತಾವು ಬೆಳೆದದ್ದನ್ನು ರಾಶಿ ಹಾಕಿ ಪೂಜಿಸುವ, ಮತ್ತು ಆ ರಾಶಿಯಿಂದ ದವಸ ಧಾನ್ಯಗಳನ್ನು ತನ್ನೊಂದಿಗೆ ಹಳ್ಳಿಯಲ್ಲಿರುವ ಕಲಾವಿದರಿಗೆ, ಭೂರಹಿತರಿಗೆ ದಾನ ನೀಡುವ ಕ್ರಮವೂ ಇದೆ. ಚಳಿಗಾಲದ ಕೊನೆಯ ಹಂತವಾದ ಈ ಕಾಲದಲ್ಲಿ ದೇಹವನ್ನು ರಕ್ಷಿಸಿಕೊಳ್ಳಲು ಬೇಕಾದ ಔಷಧಯುಕ್ತ ಬೆಳೆಯನ್ನು ಪ್ರಕೃತಿಯೇ ಕೊಟ್ಟಿರುತ್ತದೆ. ಎಳ್ಳು, ಶೇಂಗಾ, ಹುರಿ ಗಡಲೆ, ಬೆಲ್ಲ, ಕೊಬ್ಬರಿ ಮಿಶ್ರಣ ತಯಾರಿಸಿ, ಹೊಸ ಅಕ್ಕಿಯಿಂದ ತಯಾರಿಸಿದ ಸಿಹಿ ಮತ್ತು ಕಾರದ ಕಿಚಡಿ, ಬೇಯಿಸಿದ ಗೆಣೆಸು ದೇವರಿಗೆ ನೈವೇದ್ಯ ಮಾಡಿ, ಸ್ವೀಕರಿಸುವದು ಹಬ್ಬದ ವಿಶೇಷ.
ತಮ್ಮ ಜೀವನಕ್ಕೆ ಆಸರೆಯಾದ ರಾಸುಗಳನ್ನು ಅಂದು ಮೈ ತೊಳೆದು, ಊರದೇವತೆಯ ದೇವಸ್ಥಾನದ ಎದುರು ಕಿಚ್ಚು ಹಾಯಿಸುವ ಪರಿಪಾಠವೂ ಇದೆ, ದೇವಸ್ಥಾನದ ಎದುರು ಸುಮಾರು ನಾಲ್ಕು ಅಡಿ ಉದ್ದ, ಕಾಲು ಅಡಿ ಆಳವಿರುವ ಒಂದು ಗುಂಡಿ ತೊಡುತ್ತಾರೆ, ಅಲ್ಲಿ ತುಂಡು ಸೌದೆಯನ್ನು ಹಾಕಿ ಅಗ್ನಿಸ್ಪರ್ಶ ಮಾಡುತ್ತಾರೆ, ಅಲ್ಲಿ ನಿಗಿ ನಿಗಿ ಕೆಂಡ ತಯಾರು ಆಗುತ್ತದೆ ಆ ಕೆಂಡದಲ್ಲಿ ತಮ್ಮ ರಾಸುಗಳನ್ನು ಓಡಿಸುತ್ತಾರೆ. ದೇವತೆಯ ರಕ್ಷೆ ತಮ್ಮ ರಾಸುಗಳಿಗೆ ಇರಲಿ ಎನ್ನುವ ನಂಬಿಕೆ. ನಮ್ಮ ಯಾವುದೇ ಪದ್ಧತಿಯ ಆಚರಣೆಯು ಸುಮ್ಮನೆ ಇರುವದಿಲ್ಲ, ಅದರ ಹಿಂದೆ ಒಂದು ಮಹತ್ತರ ಕಾರಣವೂ ಇರುತ್ತದೆ, ಅದೇನೆಂದರೆ, ಚಳಿಯ ಕಾರಣಕ್ಕೆ ಸಣ್ಣ ಸಣ್ಣ ಕ್ರಿಮಿಕೀಟಗಳು ರಾಸುಗಳ ದೇಹದಲ್ಲಿ, ಪಾದದಲ್ಲಿ ಆಶ್ರಯ ಪಡೆದು ಅವುಗಳಿಗೆ ತೊಂದರೆ ಕೊಡುತ್ತಿರುತ್ತವೆ, ಅಲ್ಲದೆ ರಾಸುಗಳ ರಕ್ತವನ್ನೂ ಹೀರುತ್ತಿರುತ್ತವೆ, ಉರಿಯುವ ಕೆಂಡದಲ್ಲಿ ಅವು ಓಡುವದರಿಂದ ಕ್ರಿಮಿಗಳೆಲ್ಲಾ ಸುಟ್ಟು ನಾಶವಾಗುತ್ತವೆ. ಕಿಚ್ಚುಹಾಯಿಸುವ ಸಂಭ್ರಮದ ನಂತರ ಅವುಗಳನ್ನು ಶೃಂಗರಿಸಿ ಪೂಜಿಸುತ್ತಾರೆ, ಗೋವುಗಳಿಗೆ ಗೋಗ್ರಾಸ ನೀಡಿ ನಮಸ್ಕರಿಸುತ್ತಾರೆ. ಹೀಗೆ ತನ್ನ ಜೊತೆಜೊತೆಗೆ ಶ್ರಮವಹಿಸಿ ಮನುಕುಲಕ್ಕೆ ಅನ್ನನೀಡುವ ಕೈಂಕರ್ಯದಲ್ಲಿ ಭಾಗಿಯಾದ ರಾಸುಗಳಿಗೆ ದೇವರ ಸ್ಥಾನ ನೀಡಿ ತಮ್ಮ ಭಕ್ತಿ ಮೆರೆಯುತ್ತಾರೆ.
