ಪ್ರೀತಿ, ಮದುವೆಯ ನಾಟಕವಾಡಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಯುವತಿಯಿಂದ ಸುಮಾರು 1.75 ಕೋಟಿ ಹಣ ಪಡೆದು ವಂಚನೆ ಮಾಡಿದ ಆರೋಪದಲ್ಲಿ ಮೂವರ ವಿರುದ್ಧ ದೂರು ದಾಖಲಾಗಿದೆ.
ಯುವತಿಯನ್ನು ಪ್ರೀತಿಯ ನೆಪದಲ್ಲಿ ಪರಿಚಯಿಸಿಕೊಂಡಿದ್ದ ವಿಜಯ್ ರಾಜೂಗೌಡ ಎಂಬಾತ, ಕೆಂಗೇರಿಗೆ ಯುವತಿಯನ್ನು ಕರೆಸಿಕೊಂಡು ತನ್ನ ತಂದೆಯನ್ನು ನಿವೃತ್ತ ತಹಸೀಲ್ದಾರ್ ಎಂದು ಪರಿಚಯ ಮಾಡಿಕೊಟ್ಟಿದ್ದ. ತನ್ನ ಪತ್ನಿಯನ್ನೇ ಅಕ್ಕ ಎಂದು ಪರಿಚಯ ಮಾಡಿಕೊಂಡಿದ್ದ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತನ್ನ ಆಸ್ತಿ ಸಂಬಂಧ ಇಡಿಯಲ್ಲಿ ಕೇಸ್ ಆಗಿದೆ. ಹೀಗಾಗಿ, ನನ್ನ ಅಕೌಂಟ್ ಎಲ್ಲ ಬ್ಲಾಕ್ ಆಗಿದೆ. ಹೀಗಾಗಿ, 15 ಸಾವಿರ ರು. ಹಣ ಬೇಕು ಎಂದು ಮೊದಲಿಗೆ ನಾಟಕವಾಡಿದ. ಯುವತಿ ಹಣ ಕೊಡಲು ಶುರು ಮಾಡುತ್ತಿದ್ದಂತೆ, ಆಕೆಯೊಂದಿಗೆ ಹಣಕಾಸಿನ ವ್ಯವಹಾರ ಶುರು ಮಾಡಿದ್ದ. ಜತೆಯಾಗಿ ಬ್ಯುಸಿನೆಸ್ ಮಾಡೋಣ ಎಂದು ಬ್ಯಾಂಕ್‌ನಿಂದ ಯುವತಿಯ ಹೆಸರಿನಲ್ಲಿ ಲೋನ್ ಪಡೆದುಕೊಂಡಿದ್ದ ಎನ್ನಲಾಗಿದೆ.
ಹಂತಹಂತವಾಗಿ ಯುವತಿ ಮತ್ತು ಆಕೆಯ ಕಡೆಯಿಂದ ಪರಿಚಯವಾದ ಅನೇಕ ಸ್ನೇಹಿತರ ಬಳಿ ವಿಜಯ್ ಸುಮಾರು 1.75 ಕೋಟಿ ರು. ಹಣವನ್ನು ಪಡೆದುಕೊಂಡಿದ್ದ ಎನ್ನಲಾಗಿದೆ. ಅದನ್ನು ವಾಪಸ್ ಕೇಳಿದಾಗ 22 ಲಕ್ಷ ಮಾತ್ರವೇ ವಾಪಸ್ ಕೊಟ್ಟು, ಉಳಿದ ಹಣ ಗುಳುಂ ಮಾಡುವ ಪ್ರಯತ್ನ ನಡೆಸಿದ್ದ ಎಂದು ದೂರಲಾಗಿದೆ.
ಜತೆಗೆ, ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ, ಆತನಿಗೆ ಮದುವೆಯಾಗಿ ಒಂದು ಮಗು ಇದ್ದರೂ, ಹೆಂಡತಿಯನ್ನೇ ತನ್ನ ಅಕ್ಕನೆಂದು ನಂಬಿಸಿ, ಆಕೆಯನ್ನು ಮದುವೆಯಾಗುವ ಪ್ರಯತ್ನ ನಡೆಸಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿನಯ್ ರಾಜುಗೌಡ, ಬೋರೇಗೌಡ ಮತ್ತು ಸೌಮ್ಯಾ ಎಂಬುವವರ ವಿರುದ್ಧ ದೂರು ನೀಡಲಾಗಿದೆ.
ಯುವತಿ ವಿಜಯ್ ವಿರುದ್ಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವೈಟ್‌ಫೀಲ್ಡ್ ಪೊಲೀಸರು, ಪ್ರಕರಣವನ್ನು ಕೆಂಗೇರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
