ರಾಜ್ಯದಲ್ಲಿನ ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
ರಾಜ್ಯದಲ್ಲಿನ ಖಾಸಗಿ ಆಸ್ಪತ್ರೆಗಳು ತಮ್ಮ ಕ್ಲಿನಿಕ್ ಅಥವಾ ಆಸ್ಪತ್ರೆಯ ಮುಂಭಾಗ ಎಲ್ಲರಿಗೂ ಕಾಣುವಂತೆ ತಾವು ಅಲೋಪತಿ ವೈದ್ಯರೋ ಅಥವಾ ಆಯುರ್ವೇದ ವೈದ್ಯರೋ ಎಂಬುದನ್ನು ಸ್ಪಷ್ಟವಾಗಿ ತಿಳಿಸುವ ನೋಂದಣಿ ಫಲಕವನ್ನು ಅಳವಡಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಮ್ಇ) ನೋಂದಣಿ ಸಂಖ್ಯಾ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಇಂತಹ ಫಲಕವನ್ನು ರಾಜ್ಯದ ಪ್ರತಿ ಖಾಸಗಿ ಆಸ್ಪತ್ರೆಯೂ ಅಳವಡಿಸಿಕೊಳ್ಳಲೇಬೇಕು ಎಂದು ಆರೋಗ್ಯ ಇಲಾಖೆ ತಾಕೀತು ಮಾಡಿದೆ.
ನೋಂದಣಿ ನಾಮಫಲಕದಲ್ಲಿ ಕೆಪಿಎಂಸಿ ನೋಂದಣಿ ಸಂಖ್ಯೆ, ಆಸ್ಪತ್ರೆಯ ಹೆಸರು ಮತ್ತು ಮಾಲೀಕರ ಹೆಸರು ಹಾಗೂ ಇತರ ವಿವರಗಳನ್ನು ನಮೂದಿಸಿರಬೇಕು. ಈ ನೋಂದಣಿ ನಾಮಫಲಕವನ್ನು ಆಸ್ಪತ್ರೆ ಕಟ್ಟಡದ ಮುಂಭಾಗದಲ್ಲಿ ಪ್ರದರ್ಶಿಸಬೇಕು ಎಂದು ಸೂಚಿಸಿದೆ.
ಒಂದು ವೇಳೆ ಖಾಸಗಿ ಆಸ್ಪತ್ರೆ ಅಥವಾ ಕ್ಲಿನಿಕ್ ಗಳು ನೋಂದಣಿ ನಾಮಫಲಕವನ್ನು ಅಳವಡಿಸದೇ ಇದ್ದರೆ, ಅಂತಹವರ ವಿರುದ್ಧ ಕೆಪಿಎಮ್ಇ ತಿದ್ದುಪಡಿ ಕಾಯ್ದೆಯ ಸೆಕ್ಷನ್ 19(5)ರ ಅನ್ವಯ ಕಠಿಣ ಕಾನೂನು ಕ್ರಮವನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಅಥವಾ ಕುಟುಂಬ ಕಲ್ಯಾಣ ಅಧಿಕಾರಿಗಳು ಜರುಗಿಸಬೇಕೆಂದು ಸರ್ಕಾರ ಸೂಚಿಸಿದೆ.
ನೋಂದಣಿ ನಾಮಫಲಕ: ಬೋರ್ಡ್ ಕನಿಷ್ಠ ಏಳು ಅಡಿ ಅಗಲ ಮೂರು ಅಡಿ ಎತ್ತರ ಇರಬೇಕು. ಕೆಪಿಎಂಇ ನೋಂದಣಿ ಸಂಖ್ಯೆಯನ್ನು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿರುವಂತೆ 120 ಸೆಂಟಿಮೀಟರ್ ಅಗಲ 20 ಸೆಂಟಿಮೀಟರ್ ಎತ್ತರ ಇರುವಂತೆ ಪ್ರದರ್ಶಿಸಬೇಕು. ಕೆಪಿಎಂಇ ಪ್ರಮಾಣಪತ್ರದಲ್ಲಿ ನಮೂದಿಸಿರುವಂತೆ ಮಾಲೀಕರ ಹೆಸರನ್ನು 120 ಸೆಂಟಿಮೀಟರ್ ಅಗಲ 15 ಸೆಂಟಿಮೀಟರ್ ಎತ್ತರ ಅಳತೆಯಲ್ಲಿ ತೋರಿಸಬೇಕು. ಎಲ್ಲಾ ಅಕ್ಷರಗಳು ಕಪ್ಪು ಬಣ್ಣದಲ್ಲಿರಬೇಕು ಮತ್ತು ಬೋರ್ಡ್ ಸ್ಥಿರವಾಗಿರಬೇಕು.
ಅಲೋಪತಿ ವೈದ್ಯರಾಗಿದ್ದಲ್ಲಿ ಆಕಾಶ ನೀಲಿ ಬಣ್ಣದ ನೋಂದಣಿ ನಾಮ ಫಲಕ ಅಳವಡಿಸಬೇಕು. ಆಯುರ್ವೇದ ವೈದ್ಯರಾಗಿದ್ದಲ್ಲಿ ನಾಮ ಫಲಕವು ತಿಳಿ ಹಸಿರು ಬಣ್ಣದಲ್ಲಿರಬೇಕು ಎಂದು ಆರೋಗ್ಯ ಇಲಾಖೆ ನೋಂದಣಿ ನಾಮಫಲಕಕ್ಕೆ ಸಂಬಂಧಿಸಿದ ನಿಯಮಗಳನ್ನು ಸ್ಪಷ್ಟಪಡಿಸಿದೆ.
ನಕಲಿ ವೈದ್ಯರು: ಖಾಸಗಿ ಆಸ್ಪತ್ರೆ ಎದುರು ಕೆಪಿಎಂಇ ನೋಂದಣಿ ನಾಮಫಲಕ ಕಡ್ಡಾಯಗೊಳಿಸಿರುವ ಕುರಿತಂತೆ ಮಾತನಾಡಿರುವ ಆರೋಗ್ಯ ಸಚಿವರು, ಅರ್ಹತೆ ಹೊಂದಿಲ್ಲದ ಮತ್ತು ನಕಲಿ ವೈದ್ಯರು ಸಮಾಜಕ್ಕೆ ಕಂಟಕವಾಗಿದ್ದು, ರೋಗಿಗಳ ಆರೋಗ್ಯದ ವಿಚಾರದಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಇದನ್ನು ತಡೆಗಟ್ಟಲು ಮತ್ತು ರೋಗಿಗಳ ಸುರಕ್ಷತೆ ಕಾಪಾಡಲು ಮತ್ತು ಉತ್ತಮ ಆರೋಗ್ಯ ಸೇವೆ ಒದಗಿಸಲು ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದಿದ್ದಾರೆ.
