ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು. 9980178111
ಕಾನೂನು ಬಾಹಿರವಾಗಿ ಮಹಿಳೆಯೊಬ್ಬರ 90 ದಿನಗಳ ಹೆರಿಗೆ ಭತ್ಯೆ ತಡೆ ಹಿಡಿದಿದ್ದ ರಾಜ್ಯ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ತಾನು ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದರೂ ನಿವೃತ್ತಿ ಸೌಲಭ್ಯಗಳನ್ನು ತಡೆಹಿಡಿದಿದ್ದ ರಾಜ್ಯ ವಿದ್ಯುತ್ ಪ್ರಸರಣ ನಿಗಮದ ಕ್ರಮವನ್ನು ಪ್ರಶ್ನಿಸಿ 71 ವರ್ಷದ ನಿವೃತ್ತ ನೌಕರರಾಗಿರುವ ಮಹಿಳೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಕೆಪಿಟಿಸಿಎಲ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, 90 ದಿನಗಳ ಭತ್ಯೆಯನ್ನು ಬಡ್ಡಿಯೊಂದಿಗೆ ಬಿಡುಗಡೆ ಮಾಡುವಂತೆ ಸೂಚಿಸಿದೆ. ಅಲ್ಲದೇ, ಅರ್ಜಿದಾರರು ಬೆಸ್ಕಾಂಗೆ ಹೊಸದಾಗಿ ಮನವಿ ಸಲ್ಲಿಸಿ ಭತ್ಯೆ ಪಾವತಿಸುವಂತೆ ಕೋರಿದರೆ ಆ ಮನವಿಯನ್ನು ಸಂಬಂಧಪಟ್ಟ ಪ್ರಾಧಿಕಾರವು ಶೇ.8ರಷ್ಟು ಬಡ್ಡಿಯೊಂದಿಗೆ 90 ದಿನಗಳ ಭತ್ಯೆಯನ್ನು ಪಾವತಿ ಮಾಡಬೇಕು ಎಂದು ಸೂಚಿಸಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಪ್ರಾರಂಭದಲ್ಲಿ ಹೆರಿಗೆ ರಜೆ ಮಂಜೂರು ಮಾಡುವುದಕ್ಕೆ ಪತ್ನಿ ಸಂತಾನಹರಣ ಮಾಡಿಕೊಳ್ಳಬೇಕು ಎಂಬ ನಿಯಮವಿತ್ತು. ಬಳಿಕ ಪತಿಯೂ ಸಂತಾನಹರಣಕ್ಕೆ ಒಳಗಾಗಬೇಕು ಎಂಬುದಾಗಿ ತಿದ್ದುಪಡಿ ಮಾಡಲಾಗಿದೆ. ಸರ್ಕಾರಿ ನೌಕರರಾಗಿರುವವರಿಗೆ ಪತಿಯು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುವ ಅಗತ್ಯವನ್ನು ಪರಿಚಯಿಸುವ ಉದ್ದೇಶದಿಂದ ಹಾಗೂ ಮಕ್ಕಳ ಸಂಖ್ಯೆಯನ್ನು ನಿಯಂತ್ರಣದಲ್ಲಿ ಇಡುವ ಕಾರಣಕ್ಕಾಗಿ ಪತಿಗೂ ಸಂತಾನಹರಣ ಶಸ್ತ್ರ ಚಿಕಿತ್ಸೆ ಕುರಿತಂತೆ ನಿಯಮ ರೂಪಿಸಲಾಗಿತ್ತು. ಆದರೆ ರಜೆ ಮಂಜೂರಾದ 30 ವರ್ಷಗಳ ಬಳಿಕ ಪತಿಯು ಶಸ್ತ್ರ ಚಿಕಿತ್ಸೆಗೆ ಒಳಗಾಗಿಲ್ಲ ಎಂಬ ಕಾರಣ ನೀಡಿ, ನಿಯಮಗಳ ತಾಂತ್ರಿಕ ಕಾರಣಗಳನ್ನು ಉಲ್ಲೇಖಿಸಿ, ಕಾನೂನುಬಾಹಿರವಾಗಿ ರಜೆಯನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಸರಿಯಲ್ಲ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಮಹಿಳೆ ಕರ್ನಾಟಕ ವಿದ್ಯುತ್ ಮಂಡಳಿಯಲ್ಲಿ ಉದ್ಯೋಗಿಯಾಗಿದ್ದು, ಹಿರಿಯ ಸಹಾಯಕಿಯಾಗಿ ನಿವೃತ್ತರಾಗಿದ್ದರು. ಕರ್ನಾಟಕ ಸಿವಿಲ್ ಕಾಯ್ದೆ 1983ರ ನಿಯಮ 130ರ ಅಡಿಯಲ್ಲಿ ಅರ್ಜಿದಾರರಿಗೆ 90 ದಿನಗಳ ಕಾಲ ಹೆರಿಗೆ ರಜೆ ಮಂಜೂರು ಮಾಡಲಾಗಿತ್ತು. ಈ ರಜೆ ದಿನಗಳಿಗೆ ವೇತನ ಪಾವತಿ ಮಾಡಬೇಕಾದಲ್ಲಿ ಮೂರಕ್ಕಿಂತ ಹೆಚ್ಚಿನ ಮಕ್ಕಳಿರುವವರು ಕಡ್ಡಾಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂಬುದಾಗಿತ್ತು. ಬಳಿಕ ಸರ್ಕಾರಿ ಮಹಿಳಾ ಉದ್ಯೋಗಿಯ ಪತಿಯೂ ಪರ್ಯಾಯವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ನಿಯಮಗಳಿಗೆ ತಿದ್ದುಪಡಿ ಮಾಡಲಾಗಿತ್ತು.
ಅರ್ಜಿದಾರರು ನಿವೃತ್ತರಾದ ಬಳಿಕ ರಜೆ ಪಡೆದುಕೊಂಡಿದ್ದಕ್ಕೆ ಪರಿಹಾರವಾಗಿ ರಜೆಯ ನಗದೀಕರಣ ಸೇರಿದಂತೆ ನಿವೃತ್ತಿಯ ಸೌಲಭ್ಯಗಳನ್ನು ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ, ನಿಗಮವು, ನಿಯಮ 130ನ್ನು ಉಲ್ಲೇಖಿಸಿ ಅದರಂತೆ ರಜೆ ದಿನಗಳ ವೇತನ ನಗದೀಕರಣ ಮಾಡಿಕೊಳ್ಳಬೇಕಾದರೆ, ಅರ್ಜಿದಾರರ ಪತಿಯೂ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂಬ ತಾಂತ್ರಿಕ ಕಾರಣ ನೀಡಿ, ರಜೆ ಪಡೆದಿದ್ದ ದಿನಗಳ ವೇತನ ನಗದೀಕರಣ ಮಾಡಿಕೊಡುವುದಕ್ಕೆ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
WRIT PETITION NO.33653 OF 2014 (S-RES)
