News

ಚಿನ್ನ ಉಳಿತಾಯದ ಜಾರ್ ಆ್ಯಪ್ ವಿರುದ್ಧ ವಂಚನೆ ಆರೋಪ: ಕೇಸ್ ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್

Share It

ಕಾನೂನು ಬಾಹಿರವಾಗಿ ಡಿಜಿಟಲ್ ಗೋಲ್ಡ್ ಹೂಡಿಕೆಗಳನ್ನು ಸ್ವೀಕರಿಸಿ ಅಂತಹ ಹೂಡಿಕೆಗಳನ್ನು ನೇರವಾಗಿ ಚಿನ್ನದ ರೂಪದಲ್ಲಿ ಉಳಿಸಿಕೊಂಡಿರುವ ಆರೋಪ ಎದುರಿಸುತ್ತಿರುವ, ‘ಜಾರ್ ಡಿಜಿಟಲ್ ಪ್ರೈವೇಟ್ ಲಿಮಿಟೆಡ್’ ಮತ್ತು ’ಜಾರ್ಫಿನ್ ರಿಟೈಲ್ ಪ್ರೈವೇಟ್ ಲಿಮಿಟೆಡ್ ಕಂಪೆನಿ’ಗಳ ವಿರುದ್ಧದ ದೂರನ್ನು ವಜಾಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

‘ನಮ್ಮ ವಿರುದ್ಧ ಕೋರಮಂಗಲ ಠಾಣೆ ಪೊಲೀಸರು ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಎಫ್‌ಐಆರ್ ಮತ್ತು ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದ ಪ್ರಧಾನ ಸೆಷನ್ಸ್ ನ್ಯಾಯಾಲಯದಲ್ಲಿನ ನ್ಯಾಯಿಕ ವಿಚಾರಣೆ ರದ್ದುಗೊಳಿಸಬೇಕು’ ಎಂದು ಕೋರಿ ಕಂಪೆನಿಗಳ ನಿರ್ದೇಶಕ ನಿಶ್ಚಯ ಬಾಬು ಅರಕಲಗೂಡು ಮತ್ತು ‘ಜಾರ್ ಗೋಲ್ಡ್ ರಿಟೈಲ್ ಪ್ರವೇಟ್ ಲಿಮಿಟೆಡ್ ಕಂಪೆನಿ’ ಪ್ರತಿನಿಧಿ ಅವಿನಾಶ್ ವಸಂತ ದೇಶಪಾಂಡೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾ ಮಾಡಿದೆ.

ಪ್ರಾಸಿಕ್ಯೂಷನ್ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ಅನಿಯಂತ್ರಿತ ಠೇವಣಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು. ಸಾರ್ವಜನಿಕರು ಹೂಡಿಕೆ ಮಾಡಿದ ಹಣವನ್ನು ಅರ್ಜಿದಾರರು ಲೂಟಿ ಮಾಡಲು ಬಿಡಬಾರದು. ಆ ಕಾರಣಕ್ಕಾಗಿ ಕನಿಷ್ಠ ತನಿಖೆಯನ್ನು ಮುಂದುವರಿಸಲು ಅನುಮತಿ ನೀಡಬೇಕು’ ಎಂಬ ಮನವಿಯನ್ನು ನ್ಯಾಯಪೀಠ ಪುರಸ್ಕರಿಸಿದೆ.

ಗ್ರಾಹಕರು ಖರೀದಿ ಪೂರ್ಣಗೊಳಿಸಿದ ನಂತರ ಚಿನ್ನದ ಗಟ್ಟಿಯ ಯಾವುದೇ ಮಾಲಕತ್ವ ಅಥವಾ ಭೌತಿಕ ಸ್ವಾಧೀನವನ್ನು ಉಳಿಸಿಕೊಳ್ಳುವುದಿಲ್ಲ’ ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ತಿರಸ್ಕರಿಸಿರುವ ನ್ಯಾಯಪೀಠ, ‘ಡಿಜಿಟಲ್ ಚಿನ್ನವು ವಾಣಿಜ್ಯ ಪರಿಕಲ್ಪನೆಯಾಗಿ ವಿಕಸನ ಹೊಂದಿದೆ ಎಂಬುದು ನಿರ್ವಿವಾದ. ಆದರೆ, ದಾಖಲೆಯಲ್ಲಿರುವ ಅಂಶಗಳು ಗಂಭೀರ ಆರೋಪಗಳನ್ನು ಬಹಿರಂಗಪಡಿಸುತ್ತವೆ. ಅಂತೆಯೇ, ಅರ್ಜಿದಾರರಿಗೆ ಈ ಹಂತದಲ್ಲಿ ರಕ್ಷಣೆ ಒದಗಿಸಿದರೆ ಅಪರಾಧ ಪತ್ತೆಗೆ ಅದರ ಆರಂಭಿಕ ಹಂತದಲ್ಲೇ ಅಡ್ಡಿ ಉಂಟು ಮಾಡಿದಂತಾಗುತ್ತದೆ’ ಎಂದು ಸ್ಪಷ್ಟಪಡಿಸಿದೆ.

‘ಪೊಲೀಸರು ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ದೂರು ಅಥವಾ ಎಫ್‌ಐಆರ್ ತನಿಖೆಗೆ ಅರ್ಹವಲ್ಲ ಅಥವಾ ಅದು ಎಷ್ಟು ಸರಿ ಎಂಬ ಅಸ್ಪಷ್ಟ ಸಂಗತಿಗಳ ಆಧಾರದ ಮೇಲೆ ನ್ಯಾಯಪೀಠ ಯಾವುದಾದರೂ ತೀರ್ಮಾನ ತೆಗೆದುಕೊಳ್ಳುವುದು ಅಕಾಲಿಕ ಎನಿಸುತ್ತದೆ. ಅಷ್ಟೇ ಅಲ್ಲ ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.


Share It

You cannot copy content of this page