ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳು ಹಾಗೂ ಇತರೆಡೆ ಪ್ರಕಟಿಸಿರುವ ಮಾನಹಾನಿಕರ ಮಾಹಿತಿಗಳನ್ನು ತೆಗೆದುಹಾಕುವಂತೆ ಕೋರಿ ಶ್ರೀಲಂಕಾ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಯೊಬ್ಬರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಶ್ರೀಲಂಕಾದ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಮೂರ್ತಿಗಳಾದ ಎ.ಎಚ್.ಎಂ.ಡಿ. ನವಾಜ್ ಅವರು ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ರಿಟ್ ಅರ್ಜಿಯಲ್ಲಿ “ಮರೆತುಹೋಗುವ ಹಕ್ಕು” ಅಧರಿಸಿ ತಮ್ಮ ವಿರುದ್ಧ ಪ್ರಕಟಿಸಿರುವ ಮಾನಹಾನಿಕರ ವಿಷಯಗಳನ್ನು ತೆಗೆದುಹಾಕುವಂತೆ ಕೋರಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಚಿನ್ ಶಂಕರ್ ಮಗದುಮ್ ಅವರಿದ್ದ ಪೀಠ ಕೇಂದ್ರ ಸರ್ಕಾರ, ಗೂಗಲ್ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಅರ್ಜಿಯಲ್ಲಿ, ತಾವು ಮಾಡದಿರುವ ತಪ್ಪುಗಳನ್ನು ತಮ್ಮ ಮೇಲೆ ಹೊರಿಸಿ ಕೆಲವು ಸುದ್ದಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವರದಿ ಮಾಡಲಾಗಿದೆ. ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿರುವ ತಮ್ಮ ಸ್ಥಾನವನ್ನು ಗಮನದಲ್ಲಿಟ್ಟುಕೊಂಡು, ನೈತಿಕ ಆಧಾರದ ಮೇಲೆ ಶ್ರೀಲಂಕಾದಲ್ಲಿ ಮೊಕದ್ದಮೆ ಹೂಡದಿರಲು ನಿರ್ಧರಿಸಿದ್ದೇನೆ ಎಂದು ಅರ್ಜಿದಾರರು ಹೇಳಿದ್ದಾರೆ.
ಅಲ್ಲದೇ, ತಮ್ಮ ವಿರುದ್ಧದ ಎಲ್ಲಾ ಮಾನಹಾನಿಕರ ವಿಷಯಗಳನ್ನು ತೆಗೆದುಹಾಕುವಂತೆ ಮತ್ತು ಇದೇ ರೀತಿಯ ವಿಷಯಗಳ ಪುನಃ ಪ್ರಕಟಿಸದಂತೆ ನಿರ್ಬಂಧ ಹೇರುವಂತೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಗೂಗಲ್ ಇಂಡಿಯಾಕ್ಕೆ ನಿರ್ದೇಶನ ನೀಡುವಂತೆ ನ್ಯಾಯಮೂರ್ತಿಗಳು ಕೋರಿದ್ದಾರೆ.
ಸದ್ಯ ರಿಟ್ ಅರ್ಜಿ ಮೇರೆಗೆ ಕೇಂದ್ರ ಸರ್ಕಾರ ಮತ್ತು ಗೂಗಲ್‌ಗೆ ನೋಟಿಸ್ ಜಾರಿ ಮಾಡಿರುವ ಹೈಕೋರ್ಟ್, ಶ್ರೀಲಂಕಾದ ಎರಡು ಸುದ್ದಿ ಪ್ರಕಟಣೆಗಳಾದ ಕೊಲಂಬೊ ಟೆಲಿಗ್ರಾಫ್ ಮತ್ತು ಲಂಕಾ ಇ-ನ್ಯೂಸ್‌ಗಳಿಗೂ ನೋಟಿಸ್ ಜಾರಿ ಮಾಡಿದೆ, ಇವು ಮಾನಹಾನಿಕರ ವಿಷಯವನ್ನು ಪ್ರಕಟಿಸಿವೆ ಎಂದು ಹೇಳಲಾಗಿದೆ.
WP 1277/2025
