Law

ಕೊಡವರಿಗೆ ಬಂದೂಕು ಲೈಸೆನ್ಸ್ ಪಡೆಯುವುದರಿಂದ ವಿನಾಯ್ತಿ: ಹೈಕೋರ್ಟ್

Share It

ಕೊಡವ ಸಮುದಾಯಕ್ಕೆ ಬಂದೂಕು ಪರವಾನಿಗೆ ಪಡೆಯಲು ವಿನಾಯಿತಿ ನೀಡಿರುವ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.

ಬ್ರಿಟಿಷ್ ಕಾಲದಲ್ಲಿದ್ದ ನಿಯಮಗಳನ್ನೇ ಮುಂದುವರೆಸುವ ಮೂಲಕ ಕೊಡವರಿಗೆ ಬಂದೂಕು ಲೈಸೆನ್ಸ್ ನಿಂದ ವಿನಾಯ್ತಿ ನೀಡಿದ್ದನ್ನು ಆಕ್ಷೇಪಿಸಿ ಮಡಿಕೇರಿಯ ಗಾಳಿಬೀಡು ನಿವಾಸಿ ಹಾಗೂ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ವೈ.ಕೆ ಚೇತನ್ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ಸೆಪ್ಟೆಂಬರ್ 16ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು.

ಇಂದು ತೀರ್ಪು ಪ್ರಕಟಿಸಿದ ಪೀಠ, ಕೊಡವರಿಗೆ ಬಂದೂಕು ಲೈಸೆನ್ಸ್ ನಿಂದ ನೀಡಿರುವ ವಿನಾಯ್ತಿ ಕಾನೂನುಬದ್ಧವಾಗಿದೆ. ಇದರಲ್ಲಿ ಯಾವುದೇ ಸಾಂವಿಧಾನಿಕ ಹಕ್ಕು ಉಲ್ಲಂಘನೆಯಾಗಿಲ್ಲ. ಕೊಡವ ಸಮುದಾಯ ಹಾಗೂ ಜಮ್ಮಾಬಾಣೆ ಭೂಮಿ ಹೊಂದಿರುವವರಿಗೆ ಸ್ವಾತಂತ್ರ್ಯ ಪೂರ್ವದಿಂದಲೂ ಬಂದೂಕು ಪರವಾನಿಗೆಯಿಂದ ವಿನಾಯ್ತಿ ನೀಡಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯಲ್ಲಿಯೂ ಪರವಾನಿಗೆಗೆ ವಿನಾಯ್ತಿ ಇದೆ. ಹೀಗಾಗಿ ಕೇಂದ್ರ ಸರ್ಕಾರದ ಅಧಿಸೂಚನೆಯಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಪಿಐಎಲ್ ವಜಾಗೊಳಿಸಿ ಆದೇಶಿಸಿದೆ.

ಕೊಡವರ ಬಂದೂಕು ವಿನಾಯ್ತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯಲ್ಲಿ ಕೇಂದ್ರದ ಪರ ವಕೀಲರು ಸರ್ಕಾರದ ಕ್ರಮ ಸಮರ್ಥಿಸಿಕೊಂಡಿದ್ದರು. ಇದೇ ವೇಳೆ ಬಂದೂಕು ಪರವಾನಿಗೆ ವಿನಾಯ್ತಿ ಸರಿಯಿದೆ ಎಂದು ಕೊಡಗು ಮೂಲದ ಹಿರಿಯ ವಕೀಲರಾದ ಸಜನ್ ಪೂವಯ್ಯ, ಎ.ಎಸ್ ಪೊನ್ನಣ್ಣ, ಎಂ.ಟಿ ನಾಣಯ್ಯ ಪ್ರಬಲವಾಗಿ ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ – ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 1959ರ ಪ್ರಕಾರ ಬಂದೂಕು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಇಟ್ಟಕೊಳ್ಳಲು ಪ್ರತಿಯೊಬ್ಬರೂ ಲೈಸೆನ್ಸ್ ಪಡೆದುಕೊಳ್ಳಬೇಕು. ಆದರೆ, ಬ್ರಿಟಿಷ್ ಕಾಲದ ನಿಯಮಗಳನ್ನೇ ಮುಂದುವರಿಸಿಕೊಂಡು ಬಂದಿರುವ ಸರ್ಕಾರಗಳು, ಕೊಡವರಿಗೆ ಹಾಗೂ ಜಮ್ಮಾ ಭೂಮಿ ಹೊಂದಿರುವವರಿಗೆ ಲೈಸೆನ್ಸ್ ಪಡೆಯುವುದರಿಂದ ವಿನಾಯ್ತಿ ನೀಡಿವೆ. ಶಸ್ತ್ರಾಸ್ತ್ರ ಕಾಯ್ದೆ ನಿಯಮಗಳಿಂದ ಇವರಿಗಷ್ಟೇ ವಿನಾಯ್ತಿ ನೀಡುವುದು ಅಸಂವಿಧಾನಿಕ. ಕೆಲವೇ ಜನರಿಗೆ ಇಂತಹ ಸೌಲಭ್ಯ ನೀಡುವುದು ಜಾತಿ, ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಿದಂತಾಗುತ್ತದೆ.

ಮೂಲತಃ ಕೊಡವ ಜನಾಂಗಕ್ಕೆ ಕತ್ತಿ, ಬಂದೂಕು ಹೊಂದುವುದು ಸಾಂಪ್ರದಾಯಿಕ ಹಕ್ಕು ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಇಂತಹ ವಿನಾಯಿತಿ ನೀಡಿದೆ. 2019ರ ಅಕ್ಟೋಬರ್ 29ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ 2029ರ ಅಕ್ಟೋಬರ್ 31ರವರೆಗೆ ಕೊಡವರು ಹಾಗೂ ಜಮ್ಮಾ ಭೂಮಿ ಹೊಂದಿರುವವರಿಗೆ ಬಂದೂಕು ಪರವಾನಿಗೆ ಪಡೆಯುವುದರಿಂದ ವಿನಾಯ್ತಿ ನೀಡಿದೆ. ಇದು ಕಾನೂನು ಬಾಹಿರ ಕ್ರಮವಾಗಿದ್ದು, ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.


Share It

You cannot copy content of this page