News

ರಾಜ್ಯದಲ್ಲಿ ಭಿಕ್ಷಾಟನೆ ದಂದೆ ಕಂಡು ಬಂದಲ್ಲಿ ಕಠಿಣ ಕ್ರಮ: ಸಮಾಜ ಕಲ್ಯಾಣ ಸಚಿವ

Share It

ರಾಜ್ಯದಲ್ಲಿ ಭಿಕ್ಷಾಟನೆ ದಂದೆ ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.

ವಿಧಾನಪರಿಷತ್‍ನ ಅಧಿವೇಶನದಲ್ಲಿಂದು ಸದಸ್ಯರಾದ ಡಾ.ಕೆ.ಗೋವಿಂದರಾಜ್  ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭಿಕ್ಷಾಟನೆ ನಿರ್ಬಂಧ ಮಾಡಲು ಸಮಾಜ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು.ರಾಜ್ಯದಲ್ಲಿ ಕೇಂದ್ರ ಪರಿಹಾರ ಸಮಿತಿಯ ಅಧೀನದಲ್ಲಿ ಒಟ್ಟು 15 ನಿರಾಶ್ರಿತರ ಪರಿಹಾರ ಕೇಂದ್ರಗಳಿದ್ದು, ಬೆಂಗಳೂರು, ಬೆಂಗಳೂರು ಪೂರ್ವ, ಬೆಳಗಾವಿ, ಬಳ್ಳಾರಿ ಚಿತ್ರದುರ್ಗ, ದಾವಣಗೆರೆ, ಆರವಾಡ, ದಕ್ಷಿಣ ಕನ್ನಡ, ಕಲ್ಬುರ್ಗಿ, ಕೋಲಾರ, ಮೈಸೂರು, ರಾಯಚೂರು, ಶಿವಮೊಗ್ಗ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಭಿಕ್ಷುಕರ ಪುನರ್ವಸತಿಗಾಗಿ ರೂ.365.17 ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ನಿರಾಶ್ರಿತರ ಒಳಿತಿಗಾಗಿ ಮಾನಸಿಕ ಆರೋಗ್ಯ ಕೇಂದ್ರ, ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ ಕೇಂದ್ರ ಮತ್ತು ಸಿದ್ದ ಉಡುಪು ಘಟಕವನ್ನು ಸ್ಥಾಪಿಸಲು ಕೇಂದ್ರ ಪರಿಹಾರ ಸಮಿತಿಗೆ ಸೂಚಿಸಲಾಗಿದೆ.

ಭಿಕ್ಷುಕರು ಸ್ವಾಭಿಮಾನದ ಬದುಕು ನಡೆಸಲು ಹಾಗೂ ಸಾಮಾಜಿಕ ಭದ್ರತೆಗಾಗಿ ಆಧಾರ್ ಕಾರ್ಡ್ ಮಾಡಿಸಿ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ ಒದಗಿಸಲು ಸಂಬಂಧಿತ ಇಲಾಖೆಗಳೊಂದಿಗೆ ಮಂಜೂರಾತಿಗೆ ಕ್ರಮವಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಭಿಕ್ಷಾಟನೆ ಮುಕ್ತ ರಾಜ್ಯವನ್ನಾಗಿ ಮಾಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.


Share It

You cannot copy content of this page