News

ಕಾನೂನು ಪದವಿ ಇಲ್ಲದೇ ಹೈಕೋರ್ಟ್ ನ್ಯಾಯಾಮೂರ್ತಿ

Share It

ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಯನ್ನು ಬೆಚ್ಚಿಬೀಳಿಸಿದ ಹಗರಣವೊಂದು ಬೆಳಕಿಗೆ ಬಂದಿದೆ. ಇಸ್ಲಾಮಾಬಾದ್ ಹೈಕೋರ್ಟ್ ಸೋಮವಾರ ತನ್ನ ನ್ಯಾಯಾಧೀಶರಲ್ಲಿ ಒಬ್ಬರಾದ ತಾರಿಕ್ ಮೆಹಮೂದ್ ಜಹಾಂಗಿರಿ ಅವರನ್ನು ವಜಾಗೊಳಿಸುವ ಕುರಿತು ವಿವರವಾದ 116 ಪುಟಗಳ ತೀರ್ಪನ್ನು ನೀಡಿದೆ.

ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಕಳೆದ 5 ವರ್ಷಗಳಿಂದ ಇವರು ಸೇವೆ ಸಲ್ಲಿಸಿದ್ದು, ನಕಲಿ ಕಾನೂನು ಪದವಿ ಹೊಂದಿರುವುದು ಯಾರಿಗೂ ತಿಳಿಯದಂತೆ ನೋಡಿಕೊಂಡಿದ್ದರು. ಜತೆಗೆ 5 ವರ್ಷ ಕಾಲ ತೀರ್ಪುಗಳನ್ನು ನೀಡಿದ್ದರು. ಅವರು ನಕಲಿ ಡಿಗ್ರಿ ಸರ್ಟಿಫಿಕೆಟ್ ಹೊಂದಿದ್ದಾರೆಂದು ಇದೀಗ ಬಯಲಾಗಿದೆ.

ನ್ಯಾಯಮೂರ್ತಿ ತಾರಿಕ್ ಮಹಮೂದ್ ಜಹಾಂಗಿರಿ 5 ವರ್ಷಗಳ ಕಾಲ ನ್ಯಾಯಮೂರ್ತಿಯಾಗಿದ್ದರೂ ಕಾನೂನು ಪದವಿ ಹೊಂದಿರದ ಕಾರಣ, ಹೈಕೋರ್ಟ್ ನ್ಯಾಯಾಧೀಶರಾಗಿ ಅವರ ನೇಮಕಾತಿ ಕಾನೂನುಬದ್ಧವಾಗಿ ಅಮಾನ್ಯಗೊಳಿಸಲಾಗಿದೆ. ಇಸ್ಲಮಾಬಾದ್ ಹೈಕೋರ್ಟ್ 116 ಪುಟಗಳ ತೀರ್ಪನ್ನು ನೀಡಿ, ಅವರನ್ನು ಹೈಕೋರ್ಟ್ ಜಡ್ಜ್ ಹುದ್ದೆಯಿಂದ ತೆಗೆಯಲಾಗಿದೆ. ಜಹಾಂಗಿರಿ ಅವರನ್ನು ಡಿಸೆಂಬರ್ 2020ರಲ್ಲಿ ಹೈಕೋರ್ಟ್‌ಗೆ ನೇಮಿಸಲಾಗಿತ್ತು. ಅವರಿಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನ್ಯಾಯಾಧೀಶರಾಗಿ ನ್ಯಾಯಾಂಗ ಕರ್ತವ್ಯಗಳನ್ನು ನಿರ್ವಹಿಸುವುದರಿಂದ ನಿಷೇಧಿಸಲಾಗಿತ್ತು.

ಕರಾಚಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಒದಗಿಸಿದ ಮೂಲ ದಾಖಲೆಗಳನ್ನು ಆಧರಿಸಿ ಹೈಕೋರ್ಟ್ ಈ ತೀರ್ಪು ನೀಡಿದೆ. ನ್ಯಾಯಮೂರ್ತಿ ತಾರಿಕ್ ಮಹಮೂದ್ ಜಹಾಂಗಿರಿ ಅವರ ಶೈಕ್ಷಣಿಕ ದಾಖಲೆಗಳು ನಕಲಿ ಎಂದು ನ್ಯಾಯಾಲಯ ಹೇಳಿದೆ. ಜಹಾಂಗಿರಿ 1988ರಲ್ಲಿ ನಕಲಿ ದಾಖಲಾತಿ ಸಂಖ್ಯೆಯನ್ನು ಬಳಸಿಕೊಂಡು ಪರೀಕ್ಷೆಗೆ ಹಾಜರಾಗಿದ್ದರು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಅವರು ಪರೀಕ್ಷೆಯಲ್ಲಿ ನಕಲು ಮಾಡುತ್ತಿರುವುದು ಕಂಡುಬಂದಿತು. 1989ರಲ್ಲಿ ವಿಶ್ವವಿದ್ಯಾನಿಲಯವು ಅವರನ್ನು 3 ವರ್ಷಗಳ ಕಾಲ ನಿಷೇಧಿಸಿತ್ತು. ಅದಾದ ಮುಂದಿನ ವರ್ಷ, ಅವರು ಇಮ್ತಿಯಾಜ್ ಅಹ್ಮದ್ ಎಂಬ ಇನ್ನೊಬ್ಬ ವಿದ್ಯಾರ್ಥಿಗೆ ನಿಯೋಜಿಸಲಾದ ದಾಖಲಾತಿ ಸಂಖ್ಯೆಯನ್ನು ಬಳಸಿಕೊಂಡು ತಾರಿಕ್ ಜಹಾಂಗಿರಿ ಎಂಬ ಹೆಸರಿನಲ್ಲಿ ಮತ್ತೆ ಪರೀಕ್ಷೆಗೆ ಹಾಜರಾದರು.

ತೀರ್ಪಿನಲ್ಲಿ, ಜಹಾಂಗಿರಿ ಅವರಿಗೆ ಮೂಲ ದಾಖಲೆಗಳನ್ನು ಮತ್ತು ಲಿಖಿತ ಉತ್ತರವನ್ನು ನೀಡಲು ಹಲವು ಅವಕಾಶಗಳನ್ನು ನೀಡಿದ್ದರೂ ಅವರು ದಾಖಲೆ ನೀಡಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.


Share It

You cannot copy content of this page