ಕಾನೂನು ಮತ್ತು ಸುವ್ಯವಸ್ಥೆಯ ಆಧಾರದ ಮೇಲೆ ನಮಾಜ್ ಮಾಡುವವರ ಸಂಖ್ಯೆಯನ್ನು ನಿರ್ಬಂಧಿಸಲು ಸಾಧ್ಯವಿಲ್ಲ, ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಿದ್ದರೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೋಗಿ ಎಂದು ಅಲಹಾಬಾದ್ ಹೈಕೋರ್ಟ್ ಸಂಭಾಲ್ ಎಸ್ಪಿ ಹಾಗೂ ಜಿಲ್ಲಾಧಿಕಾರಿಗೆ ಚಾಟಿ ಬೀಸಿದೆ.
ಸಂಭಾಲ್ ಜಿಲ್ಲೆಯ ಮಸೀದಿಯಲ್ಲಿ ರಂಜಾನ್ ಸಮಯದಲ್ಲಿ ನಮಾಜ್ ಮಾಡುವ ಜನರ ಸಂಖ್ಯೆಯನ್ನು ನಿರ್ಬಂಧಿಸುವ ಉತ್ತರ ಪ್ರದೇಶ ಆಡಳಿತದ ನಿರ್ಧಾರವನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯದ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಅತುಲ್ ಶ್ರೀಧರನ್ ಮತ್ತು ನ್ಯಾಯಮೂರ್ತಿ ಸಿದ್ಧಾರ್ಥ್ ನಂದನ್ ಅವರಿದ್ದ ವಿಭಾಗೀಯ ಪೀಠವು ಆದೇಶ ನೀಡಿದ್ದು, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಭಕ್ತರ ಸಂಖ್ಯೆಯ ಕಾರಣಕ್ಕೆ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಎಂದು ಭಾವಿಸದರೆ ಮತ್ತು ಅವರಿಗೆ ಕಾನೂನಿನ ನಿಯಮಗಳನ್ನು ಜಾರಿಗೊಳಿಸಲು ಸಾಧ್ಯವಾಗದಿದ್ದರೆ ಒಂದು ರಾಜೀನಾಮೆ ನೀಡಬೇಕು ಅಥವಾ ವರ್ಗಾವಣೆ ಕೋರಬೇಕು ಎಂದು ಹೇಳಿದೆ.
ರಾಜ್ಯದ ಪರ ವಾದಿಸಿದ ವಕೀಲರು, ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಕ್ತರ ಸಂಖ್ಯೆಯನ್ನು ನಿರ್ಬಂಧಿಸುವ ಆದೇಶವನ್ನು ಅಂಗೀಕರಿಸಲಾಗಿದೆ ಎಂದು ಹೇಳಿದರು. ಇದನ್ನು ತಿರಸ್ಕರಿಸಿರುವ ಹೈಕೋರ್ಟ್, ಯಾವುದೇ ಸಂದರ್ಭದಲ್ಲೂ ಕಾನೂನನ್ನು ಕಾಪಾಡುವುದು ರಾಜ್ಯದ ಕರ್ತವ್ಯವಾಗಿದೆ. “ಸ್ಥಳೀಯ ಅಧಿಕಾರಿಗಳು ಅಂದರೆ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂದು ಭಾವಿಸಿ ಮಸೀದಿಯ ಆವರಣದಲ್ಲಿ ಭಕ್ತರ ಸಂಖ್ಯೆಯನ್ನು ಮಿತಿಗೊಳಿಸಲು ಬಯಸಿದರೆ, ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಅಥವಾ ಕಾನೂನಿನ ನಿಯಮವನ್ನು ಜಾರಿಗೊಳಿಸಲು ಸಾಕಷ್ಟು ಸಮರ್ಥರಲ್ಲ ಎಂದು ಭಾವಿಸಿದರೆ ವರ್ಗಾವಣೆಯನ್ನು ಕೋರಬೇಕು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೇ, ಪ್ರತಿಯೊಂದು ಸಮುದಾಯವು ಗೊತ್ತುಪಡಿಸಿದ ಪೂಜಾ ಸ್ಥಳದಲ್ಲಿ ಶಾಂತಿಯುತವಾಗಿ ಪೂಜೆ ಸಲ್ಲಿಸಲು ಸಾಧ್ಯವಾಗುವಂತೆ ನೋಡಿಕೊಳ್ಳುವುದು ರಾಜ್ಯದ ಕರ್ತವ್ಯವಾಗಿದೆ ಎಂದಿದೆ.
ರಂಜಾನ್ ತಿಂಗಳಲ್ಲಿ ಪ್ರಾರ್ಥನೆ ನಡೆಸದಂತೆ ತಡೆಯಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಮುನಜೀರ್ ಖಾನ್ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿದಾರರು, ರಂಜಾನ್ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಸೇರುವ ನಿರೀಕ್ಷೆಯಿದ್ದರೂ, ಅಧಿಕಾರಿಗಳು ಆವರಣದಲ್ಲಿ ಕೇವಲ ಇಪ್ಪತ್ತು ಜನರಿಗೆ ಮಾತ್ರ ನಮಾಜ್ ಮಾಡಲು ಅನುಮತಿ ನೀಡಿದ್ದರು. ಇದು ಸರಿಯಾದ ಕ್ರಮವಲ್ಲ ಎಂದು ವಾದಿಸಿದ್ದರು.
ಕಾನೂನು ಮತ್ತು ಸುವ್ಯವಸ್ಥೆಯ ಕಾಳಜಿಯಿಂದಾಗಿ ಭಕ್ತರ ಸಂಖ್ಯೆಯ ಮೇಲೆ ಮಿತಿಯನ್ನು ವಿಧಿಸಲಾಗಿದೆ ಎಂದು ವಾದಿಸಿ, ರಾಜ್ಯ ಸರ್ಕಾರವು ತನ್ನ ನಿರ್ಬಂಧವನ್ನು ಸಮರ್ಥಿಸಿಕೊಂಡಿತ್ತು.
ರಾಜ್ಯ ಸರ್ಕಾರದ ಸಮರ್ಥನೆಯನ್ನು ತಿರಸ್ಕರಿಸಿರುವ ನ್ಯಾಯಪೀಠ, ಎಲ್ಲಾ ಸಂದರ್ಭಗಳಲ್ಲಿಯೂ ಕಾನೂನನ್ನು ಸಮರ್ಥವಾಗಿ ಜಾರಿ ಮಾಡುವುದು ಮತ್ತು ಪ್ರತಿಯೊಂದು ಸಮುದಾಯವು ತನ್ನ ನಂಬಿಕೆಯನ್ನು ಶಾಂತಿಯುತವಾಗಿ ಆಚರಿಸಲು ಸಾಧ್ಯವಾಗುವಂತೆ ನೋಡಿಕೊಳ್ಳುವುದು ರಾಜ್ಯದ ಕರ್ತವ್ಯ ಎಂದು ಒತ್ತಿ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 16ಕ್ಕೆ ನಿಗದಿಪಡಿಸಿದೆ.
ಕೋರ್ಟ್ ಆದೇಶದಲ್ಲೇನಿದೆ: “6. We out rightly reject the contention put forth by the learned counsel for the State. It is the duty of the State to ensure that the rule of law prevails under every circumstance. If the local authorities i.e. Superintendent of Police and Collector feels that the law and order situation could arise because of which they want to limit the number of worshipers within the premises, they should either resign from their post or seek transfer out side Sambhal if they feel they are not competent enough to enforce the rule of law. It is duty of the State to ensure that every community is able to offer worship peacefully in the designated place of worship and if it is a private property as already been held by the Court earlier, to perform worship without any permission from the State. This Court has already settled that it is only where prayers or religious functions have to be held on public land or spill over the public property that the involvement of the State is essential and permission must be sought.”
Case No: WRIT – C No. – 5996 of 2026
