ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ
ಚಾಮರಾಜನಗರ: ರಾಜಿ ಸಂಧಾನದ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ಲೋಕ್‌ಅದಾಲತ್ ಅನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಡಾ. ಕೆ. ಮನ್ಮಧರಾವ್ ಅವರು ಸಲಹೆ ಮಾಡಿದರು.
ನಗರದ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿಂದು ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ೨೦೨೬ನೇ ಸಾಲಿನ ಮೊದಲ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾದ ನಂತರ ಒಂದೆರಡು ದಿನಗಳಲ್ಲಿ ಇತ್ಯರ್ಥವಾಗುವುದಿಲ್ಲ. ಪ್ರಕರಣಗಳ ಫಲಿತಾಂಶದ ವಿಳಂಬದಿಂದಾಗಿ ಜನರಿಗೆ ಸಾಕಷ್ಟು ಸಮಯ, ಹಣ ವ್ಯರ್ಥವಾಗಲಿದೆ. ನ್ಯಾಯಾಲಯಗಳಿಗೂ ಒತ್ತಡ ಎದುರಾಗಲಿದೆ. ಇದನ್ನು ಮನಗಂಡಿರುವ ಸುಪ್ರೀಂ ಕೋರ್ಟ್ ನ್ಯಾಯಾಲಯಗಳಲ್ಲಿ ರಾಜಿಯಾಗಬಹುದಾದ ಪ್ರಕರಣಗಳನ್ನು ಪಟ್ಟಿ ಮಾಡಿ ವರ್ಷದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಲೋಕ್ ಅದಾಲತ್ ನಡೆಸಿ ಪ್ರಕರಣಗಳನ್ನು ಶೀಘ್ರಗತಿಯಲ್ಲಿ ಇತ್ಯರ್ಥಪಡಿಸಲು ಆದೇಶಿಸಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ. ಪ್ರಭಾವತಿ ಅವರು ಮಾತನಾಡಿ ಲೋಕ್ ಅದಾಲತ್ ಪ್ರಕ್ರಿಯೆಯು ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ಸುಲಭವಾಗಿ ಕೈಗೆಟುಕುವ ಮತ್ತು ತ್ವರಿತ ನ್ಯಾಯವನ್ನು ಖಚಿತಪಡಿಸುವುದೇ ಆಗಿದೆ. ಈ ಪರಿಕಲ್ಪನೆಯು ನಮ್ಮ ಸಂವಿಧಾನದ ಅಶಯಗಳ ನಿಜವಾದ ಸ್ವರೂಪವನ್ನು ಪ್ರತಿಬಿಂಬಿಸಲಿದೆ. ನ್ಯಾಯವು ವಿಳಂಬ ಹಾಗೂ ಸಂಕೀರ್ಣವಾಗಬಾರದು ಮತ್ತು ಸಾಮಾನ್ಯ ವ್ಯಕ್ತಿಯ ವ್ಯಾಪ್ತಿಯಿಂದ ಹೊರಗಿರಬಾರದು. ಪ್ರಕರಣಗಳು ಇತ್ಯರ್ಥಕ್ಕಾಗಿ ಸೌಹಾರ್ದತೆ, ಸಾಮರಸ್ಯ, ರಾಜಿ ಸಂಧಾನ ಹಾಗೂ ಪರಸ್ಪರ ತಿಳಿವಳಿಕೆಯನ್ನು ಉತ್ತೇಜಿಸುತ್ತದೆ ಎಂದರು.
ಸಂಘರ್ಷದ ಬದಲಾಗಿ ಸಹಕಾರ, ಒಮ್ಮತದ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಅದಾಲತ್ ಉತ್ತಮ ವೇದಿಕೆಯಾಗಿದೆ. ಇದರಿಂದ ಕಕ್ಷಿದಾರರ ಅಮೂಲ್ಯ ಸಮಯ, ಸಂಪನ್ಮೂಲ ಉಳಿತಾಯವಾಗಿ ಮಾನಸಿಕ ಒತ್ತಡವು ಕಡಿಮೆಯಾಗಲಿದೆ. ಪ್ರಕರಣಗಳ ಅನಿಶ್ವಿತತೆ ದೂರಮಾಡಿ ಉಭಯ ಪಕ್ಷಾಕಾರರಕಲ್ಲಿ ಭಾಂಧವ್ಯ ವೃದ್ಧಿಸಲಿದೆ. ನ್ಯಾಯ ಎಂದರೆ ನ್ಯಾಯಲಯಗಳಲ್ಲಿ ನೀಡುವ ತೀರ್ಪು ಮಾತ್ರವಲ್ಲ, ಬದಲಾಗಿ ಪರಸ್ಪರ ಗೌರವ, ತಿಳಿವಳಿಕೆಯಿಂದ ಬಗೆಹರಿಸುವುದು ಸಹ ನ್ಯಾಯವೇ ಆಗಿದೆ. ಪರ್ಯಾಯ ಇತ್ಯರ್ಥ ವಿಧಾನಗಳನ್ನು ಬಲಪಡಿಸಿ ಸಾಮರಸ್ಯದ ಸಂಸ್ಕೃತಿ ಬೆಳೆಸಲು ನಾವೆಲ್ಲರೂ ಸಂಕಲ್ಪ ಮಾಡೋಣ ಎಂದು ಜಿಲ್ಲಾ ನ್ಯಾಯಾಧೀಶರಾದ ಜಿ. ಪ್ರಭಾವತಿ ಅವರು ತಿಳಿಸಿದರು.
ಅಪರ ಜಿಲ್ಲಾ ಮತ್ತು ಸೆಷೆನ್ಸ್ (ಎಫ್.ಟಿ.ಎಸ್.ಸಿ-೧) ನ್ಯಾಯಾಧೀಶರಾದ ಎಸ್.ಜೆ. ಕೃಷ್ಣ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಡಾ. ಕೆ. ಮನ್ಮಧರಾವ್ ಅವರಿಗೆ ಸನ್ಮಾನಿಸಲಾಯಿತು.
