ಏಲೂರು: ಪೋಷಕರ ಜಗಳದ ಸಮಯದಲ್ಲಿ ಐದು ವರ್ಷದ ಬಾಲಕಿಯೊಬ್ಬಳು ಕೀಟನಾಶಕ ಬೆರೆಸಿದ ತಂಪು ಪಾನೀಯವನ್ನು ಆಕಸ್ಮಿಕವಾಗಿ ಸೇವಿಸಿ ಸಾವನೊಪ್ಪಿರುವ ಘಟನೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಮಗುವಿನ ತಾಯಿ ತನ್ನ ಗಂಡನೊಂದಿಗೆ ನಡೆದ ಜಗಳದ ಸಮಯದಲ್ಲಿ ಬೆದರಿಸಲು ಪಾನೀಯದಲ್ಲಿ ಕೀಟನಾಶಕ ಬೆರೆಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ. ಈ ವಿಷಯದ ಅರಿವಿಲ್ಲದ ಬಾಲಕಿ ಆ ಪಾನೀಯವನ್ನು ಸೇವಿಸಿದ್ದಾಳೆ. ಇದನ್ನು ಅರಿತ ಪೋಷಕರು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.
ಬುಟ್ಟೈ-ಗುಡೆಮ್ ಮಂಡಲದ ಅಂತರ್-ವೇದಿಗುಡೆಮ್ ಗ್ರಾಮದ ನಿವಾಸಿಗಳಾದ ನಾಗೇಂದ್ರ ಬಾಬು ಮತ್ತು ಕುಮಾರಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ನಂತರ ಜಗಳ ವಿಕೋಪಕ್ಕೆ ತಿರುಗಿತ್ತು. ಆಗ ಕುಮಾರಿ ಮನೆಯಲ್ಲಿದ್ದ ತಂಪು ಪಾನೀಯದ ಬಾಟಲಿಗೆ ಕೀಟನಾಶಕವನ್ನು ಸೇರಿಸಿ ತನ್ನ ಗಂಡನಿಗೆ ಬೆದರಿಕೆ ಹಾಕುವ ಉದ್ದೇಶದಿಂದ ಇಟ್ಟುಕೊಂಡಿದ್ದಾಳೆ. ನಂತರ ಬಾಟಲಿಯ ಬಗ್ಗೆ ಮರೆತು ಹೋಗಿದ್ದಾಳೆ. ತದನಂತರ ದಂಪತಿಗಳ ಮಗಳು ರಿತಿಕಾ ಶ್ರೀ (5) ತಿಳಿಯದೆ ವಿಷಪೂರಿತ ತಂಪು ಪಾನೀಯವನ್ನು ಕುಡಿದ ಕಾರಣ ಈ ದುರಂತ ಸಂಭವಿಸಿದೆ ಎಂದು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
