News

ಬಾಸ್ ಸಿನಿಮಾಗೆ ಸಂಕಷ್ಟ; ಲಾಯರ್ ನೋಟಿಸ್ ಜಾರಿಗೊಳಿಸಿದ ದರ್ಶನ್ ಪರ ವಕೀಲರು

Share It

ಬೆಂಗಳೂರು: ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಬಂಧಿತರಾಗಿದ್ದಾರೆ. ಈ ಪ್ರಕರಣದಲ್ಲಿ ಎ2 ಆರೋಪಿ ಆಗಿದ್ದು ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ನಡುವೆ ಬಾಸ್ ಎನ್ನುವ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಅದರ ಟೀಸರ್ ಲಾಂಚ್ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ದರ್ಶನ್ ಪರ ವಕೀಲರು ಸಿನಿಮಾ ಬಿಡುಗಡೆಯಾಗದಂತೆ ತಡೆ ಕೋರಿ ಸೆನ್ಸಾರ್ ಮಂಡಳಿಗೆ ಲಾಯರ್ ನೋಟಿಸ್ ಜಾರಿ ಮಾಡಿದ್ದಾರೆ.

ಸಿನಿಮಾ ಟೀಸರ್ ನೋಡಿದರೆ ಇದು ದರ್ಶನ್ ಪ್ರಕರಣವನ್ನೇ ನೆನಪಿಸುವಂತಿದೆ. ಇದು ಚರ್ಚೆಗೆ ಕಾರಣ ಕೂಡ ಆಗಿದೆ. ಹೀಗಿರುವಾಗಲೇ ದರ್ಶನ್ ಪರ ವಕೀಲರು ಸೆನ್ಸಾರ್ ಮಂಡಳಿಗೆ ನೋಟಿಸ್ ನೀಡಿದ್ದು, ಸಿನಿಮಾಗೆ ಸೆನ್ಸಾರ್ ಮಾಡದಂತೆ ಕೋರಿದ್ದಾರೆ. ಈ ಸಿನಿಮಾದ ನಿರ್ದೇಶನವನ್ನು ಲವ ಎನ್ನುವವರು ಮಾಡಿದ್ದು, ತನುಷ್ ಶಿವಣ್ಣ ನಾಯಕನಾಗಿ ಸಿನಿಮಾದಲ್ಲಿ ನಟಿಸಿದ್ದಾರೆ.

ರೇಣಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದು ಬೆಂಗಳೂರಿನ ಪಟ್ಟಣಗೆರೆ ಶೆಡ್ ನಲ್ಲಿ ಕೊಲೆ ಮಾಡಲಾಗಿತ್ತು. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಕೂಡ ಸ್ಥಳದಲ್ಲಿ ಇದ್ದರು ಎನ್ನುವ ಆರೋಪವಿದೆ. ಆ ಬಳಿಕ ಹೆಣವನ್ನು ಮೋರಿ ಪಕ್ಕದಲ್ಲಿ ಹಾಕಲಾಗಿತ್ತು. ಹೆಣ ಬಿಸಾಕಿದವರು ಸಿಕ್ಕಿ ಬಿದ್ದಿದ್ದರು. ನಂತರ ದರ್ಶನ್ ಹೆಸರು ಕೂಡ ಹೊರಬಂದಿತ್ತು. ಅವರನ್ನು ಬಂಧಿಸಲಾಗಿತ್ತು. ಆದರೆ ತಾವು ನಿರಪರಾಧಿ ಎಂದು ಅವರು ಹೇಳುತ್ತಾ ಬರುತ್ತಿದ್ದಾರೆ. ಈಗ ರಿಲೀಸ್ ಆಗಿರುವ ಬಾಸ್ ಸಿನಿಮಾ ಟೀಸರ್ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಹೋಲುವ ರೀತಿಯಲ್ಲಿ ಇರುವಂತಿದೆ.

ಟೀಸರ್ ನಲ್ಲಿ ಶೆಡ್, ಮೋರಿಗಳನ್ನು ತೋರಿಸಲಾಗಿದೆ. ಸೆಲೆಬ್ರಿಟಿ ಒರ್ವ ಈ ಪ್ರಕರಣದಲ್ಲಿ ಸಿಲುಕುತ್ತಾನೆ. ತಾನು ನಿರಪರಾಧಿ ಎಂದು ಹೇಳುತ್ತಾನೆ. ಇದರ ಹೊರತಾಗಿ ಇದು ನೈಜ ಘಟನೆ ಆಧಾರಿತ ಕಥೆ ಎಂದು ಹೇಳಲಾಗಿದೆ. ನಟ ದರ್ಶನ್ ಪ್ರಕರಣ ಇನ್ನೂ ಕೋರ್ಟ್ ನಲ್ಲಿದ್ದು, ದರ್ಶನ್ ತಪ್ಪು ಮಾಡಿದ್ದಾರೆ ಅಥವಾ ಮಾಡಿಲ್ಲ ಎಂಬುದನ್ನು ಕೋರ್ಟ್ ನಿರ್ಧರಿಸುತ್ತದೆ. ಅದಕ್ಕೂ ಮೊದಲೇ ಈ ಘಟನೆ ಆಧರಿಸಿ ಸಿನಿಮಾ ಮಾಡಿರುವುದು ತಪ್ಪು ಎಂದು ದರ್ಶನ್ ಪರ ವಕೀಲರು ಸೆನ್ಸರ್ ಮಂಡಳಿಗೆ ನೋಟೀಸ್ ನೀಡಿದ್ದಾರೆ.


Share It

You cannot copy content of this page