ದೂರು ಕೊಡಲು ಹೋಗಿದ್ದ ಮಹಿಳೆಗೆ ಪೊಲೀಸ್ ಇನ್ಸ್ಪೆಕ್ಟರ್ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಲೈಂಗಿಕವಾಗಿ ಸಹಕರಿಸು. ಇಲ್ಲ ಅಂದ್ರೆ 25 ಲಕ್ಷ ಕೊಡು. ಅದು ಸಹ ಆಗದಿದ್ದರೆ ನಿನ್ನ ಗಂಡನ ಮೇಲೆ ರೌಡಿಶೀಟ್ ಓಪನ್ ಮಾಡುವುದಾಗಿ ಇನ್ಸ್ಪೆಕ್ಟರ್ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಮಹಿಳೆ ಆರೋಪ ಮಾಡಿದ್ದಾರೆ. ಸುಳ್ಳು ಕೇಸ್ ನಲ್ಲಿ ಬಂಧನಕ್ಕೊಳಗಾದ ಪತಿಯನ್ನು ಬಿಡುಗಡೆ ಮಾಡುವಂತೆ ಮಹಿಳೆ, ಮೂಡಬಿದ್ರೆ ಪೊಲೀಸ್ ಠಾಣೆಗೆ ತೆರಳಿದ್ದು, ಈ ವೇಳೆ ಇನ್ಸ್ಪೆಕ್ಟರ್ ಸಂದೇಶ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.
ಆರೋಪವೇನು: ಪ್ರಕರಣವೊಂದರಲ್ಲಿ ಮೂಡಬಿದ್ರೆ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದರು. ಈ ಸಂಬಂಧ ಬಂಧಿತ ವ್ಯಕ್ತಿಯ ಪತ್ನಿ ಪೊಲೀಸ್ ಠಾಣೆಗೆ ತೆರಳಿ ತಮ್ಮ ಪತಿಯನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಈ ವೇಳೆ ಇನ್ಸ್ಪೆಕ್ಟರ್ ಬೆದರಿಕೆ ಹಾಕಿದ್ದಾರೆ ಎಂದು ಸ್ವತಃ ಮಹಿಳೆಯೇ ಆರೋಪಿಸಿದ್ದಾರೆ. ಪತಿಯನ್ನು ಬಿಡಬೇಕಂದ್ರೆ ಲೈಂಗಿಕವಾಗಿ ಸಹಕರಿಸು. ಇಲ್ಲ 25 ಲಕ್ಷ ರೂಪಾಯಿ ಕೊಡಬೇಕು. ಇಲ್ಲಿಗೆ ಪೋಸ್ಟ್ ಮಾಡಿಸಿಕೊಂಡು ಬರಲು ಗೃಹ ಸಚಿವರಿಗೆ 50 ಲಕ್ಷ ರೂಪಾಯಿ ಕೊಟ್ಟಿದ್ದೇನೆ. ಹಣ ಕೊಡದಿದ್ರೆ ನಿನ್ನ ಪತಿ ಮೇಲೆ ರೌಡಿಶೀಟ್ ಓಪನ್ ಮಾಡುತ್ತೇನೆ ಎಂದು ಇನ್ಸಪೆಕ್ಟರ್ ಸಂದೇಶ ಬೆದರಿಕೆ ಹಾಕಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ.
ನೂರಾರು ಮಹಿಳೆಯರು ಇದೇ ರೀತಿ ನನ್ನ ಜೊತೆಗೆ ಇದ್ದಾರೆ. ಅವರಂತೆ ನೀನು ಕೂಡ ಲೈಂಗಿಕವಾಗಿ ಸಹಕರಿಸು. ಇಲ್ಲದಿದ್ರೆ ಡ್ರಗ್ಸ್ ಪೆಡ್ಲರ್ಗಳಿಗೆ ಹೇಳಿ ನಿನ್ನ ಮರ್ಯಾದೆ ತೆಗೆಯುತ್ತೇನೆ ಎಂದು ಇನ್ಸ್ಪೆಕ್ಟರ್ ಸಂದೇಶ್ ಧಮ್ಕಿ ಹಾಕಿದ್ದಾಗಿ ಸಂತ್ರಸ್ತ ಮಹಿಳೆ ಹೇಳಿದ್ದಾರೆ.
ಈ ಸಂಬಂಧ ಮಹಿಳೆ, ಇನ್ಸ್ಪೆಕ್ಟರ್ ಸಂದೇಶ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೂ ಯಾವುದೇ ಉಪಯೋಗವಾಗಿಲ್ಲ. ಪಿಐ ಸಂದೇಶ ಮೇಲೆ ಮೇಲಾಧಿಕಾರಿಗಳಿಗಳ ಕೃಪಾಕಟಾಕ್ಷ ಇದೆ. ಹೀಗಾಗಿ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಮಹಿಳೆ ಆರೋಪ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
