ಬೇಸಿಗೆ ಕಾಲ ಮುಗಿಯುವವರೆಗೆ ಮಾ.15 ರಿಂದ ಮೇ 31ರವರೆಗೆ ರಾಜ್ಯದ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಕಲಾಪಕ್ಕೆ ಹಾಜರಾಗುವ ವೇಳೆ ವಕೀಲರು ಕಪ್ಪು ಕೋಟ್ ಧರಿಸುವುದರಿಂದ ವಿನಾಯಿತಿ ನೀಡಿ ಹೈಕೋರ್ಟ್ ಅಧಿಸೂಚನೆ ಹೊರಡಿಸಿದೆ.
ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯದಲ್ಲಿ ಕಪ್ಪು ಕೋರ್ಟ್ ಧರಿಸುವುದರಿಂದ ವಕೀಲರಿಗೆ ವಿನಾಯಿತಿ ನೀಡುವಂತೆ ಕೋರಿ ಬೆಂಗಳೂರು ವಕೀಲರ ಸಂಘ ಮತ್ತು ಕರ್ನಾಟಕ ವಕೀಲರ ಪರಿಷತ್ ಹೈಕೋರ್ಟ್‌ಗೆ ಮನವಿ ಪತ್ರ ಸಲ್ಲಿಸಿತ್ತು.
ಹೈಕೋರ್ಟ್ ನ್ಯಾಯಾಯಗಳ ಕಲಾಪಕ್ಕೆ ಹಾಜರಾಗುವ ವೇಳೆ ವಕೀಲರು ಕಪ್ಪು ಕೋರ್ಟ್ ಧರಿಸಲು ವಿನಾಯಿತಿ ನೀಡಲಾಗಿದೆ. ಆದರೆ, ಈ ವಿನಾಯ್ತಿ ಬಿಳಿ ಶರ್ಟ್ ಮತ್ತು ನೆಕ್ ಬ್ಯಾಂಡ್ ಧರಿಸುವುದಕ್ಕೆ ಅನ್ವಯಿಸುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಇಲ್ಲ. ಈಗಾಗಲೇ ಬಿಸಿಲಿನ ಪ್ರಮಾಣ ದಿನೇ ದಿನೇ ಏರುತ್ತಿದೆ. ಈ ಸಂದರ್ಭದಲ್ಲಿ ಬಿಳಿ ಬಟ್ಟೆ ಮೇಲೆ ಕಪ್ಪು ಕೋಟ್ ಮತ್ತು ಬ್ಯಾಂಡ್ ಹಾಕುವುದು ಕಷ್ಟ. ಹಾಗಾಗಿ ಕಪ್ಪು ಕೋಟ್ ಧರಿಸುವುದರಿಂದ ಬೇಸಿಗೆ ರಜಾಕಾಲ ಮುಗಿದು ನ್ಯಾಯಾಲಯಗಳು ಕೆಲಸ ಪುನಾರಂಭಿಸುವವರೆಗೆ ಮಾ.15ರಿಂದ ಅನ್ವಯವಾಗುವಂತೆ ವಿನಾಯಿತಿ ನೀಡಬೇಕು ಎಂದು ವಕೀಲರ ಸಂಘ ಕೋರಿತ್ತು.
