ನವದೆಹಲಿ: ಸಶಸ್ತ್ರ ಸೀಮಾ ಬಲದಲ್ಲಿನ 233 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 10ನೇ, 12ನೇ ತರಗತಿ, ಐಟಿಐ/ಡಿಪ್ಲೊಮಾ ಅರ್ಹತೆ ಹೊಂದಿರುವ 18 ರಿಂದ 27 ವರ್ಷದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಹುದ್ದೆಗಳಿಗೆ 25,500 ದಿಂದ 81,100 ರೂ. ಪೇ ಬ್ಯಾಂಡ್ ಆಗಿದೆ. ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ನಡೆಯಲಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಏಪ್ರಿಲ್ 19 ಕೊನೆಯ ದಿನಾಂಕವಾಗಿದೆ.
ಅಭ್ಯರ್ಥಿಗಳ ಆಯ್ಕೆಯನ್ನು ಒಟ್ಟು ನಾಲ್ಕು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲಿಗೆ ಲಿಖಿತ ಪರೀಕ್ಷೆ ನಡೆಯಲಿದ್ದು, ಅದರಲ್ಲಿ ತೇರ್ಗಡೆಯಾದವರಿಗೆ ದೈಹಿಕ ದಕ್ಷತೆಯ ಪರೀಕ್ಷೆ ಮತ್ತು ದೈಹಿಕ ಪ್ರಮಾಣೀಕರಣ ಪರೀಕ್ಷೆಗಳು ನಡೆಯಲಿವೆ. ಈ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳನ್ನು ಅಂತಿಮವಾಗಿ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡುವ ಮುನ್ನ ಚಾಲ್ತಿಯಲ್ಲಿರುವ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ ಅಥವಾ ಇತರ ಗುರುತಿನ ಚೀಟಿ, ವಯಸ್ಸಿನ ಪುರಾವೆ ಹಾಗೂ ಶೈಕ್ಷಣಿಕ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕಿದೆ. ಎಸ್‌ಎಸ್‌ಬಿಯ ಅಧಿಕೃತ ವೆಬ್‌ಸೈಟ್ ಲಿಂಕ್ ಮೂಲಕ ಅರ್ಜಿಯನ್ನು ಸಲ್ಲಿಸಿ, ಅಗತ್ಯವಿರುವ ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ, ನಿಮ್ಮ ವರ್ಗಕ್ಕೆ ಅನ್ವಯವಾಗುವ ಅರ್ಜಿ ಶುಲ್ಕವನ್ನು ಪಾವತಿಸಬೇಕಿದೆ.
