Column

ಮರಳಿ ಬಂದ ಯುಗಾದಿಗೊಂದು ಲೆಕ್ಕಾಚಾರ

Share It

ಎನ್.ಎಸ್.ಶ್ರೀಧರ ಮೂರ್ತಿ, ಹಿರಿಯ ಪತ್ರಕರ್ತರು, 9538181140

ಈ ವರ್ಷ ಎಂದರೆ ಶ್ರೀ ಪರಾಭವ ನಾಮ ಸಂವತ್ಸರದ ಯುಗಾದಿಯು ಮಾರ್ಚಿ 19ರ  ಅಮಾವಾಸ್ಯೆಯ ದಿನವೇ ಬಂದಿದೆ. ಎರಡೂ ದಿನಗಳ ಸೂರ್ಯೋದಯದಲ್ಲಿ ಇಲ್ಲದಿರುವ ತಿಥಿಯನ್ನು ʼಕ್ಷಯʼ ತಿಥಿ ಎಂದು ಕರೆಯುತ್ತಾರೆ. (ಮಾರ್ಚ್ 19ರ ಬೆಳಿಗ್ಗೆ 6.54ಕ್ಕೆ ಅಮಾವಾಸ್ಯೆ ಮುಗಿದರೆ ಅದೇ ದಿನ ಬೆಳಗಿನ ಜಾವ 4.51ಕ್ಕೆ ಪಾಡ್ಯ ಮುಗಿಯುತ್ತದೆ. ಭಾರತೀಯ ಕಾಲಮಾನಕ್ಕೆ ಸೂರ್ಯೋದಯ ಲೆಕ್ಕವಾದ್ದರಿಂದ ಮಾರ್ಚ್ 20ರ ಬೆಳಿಗ್ಗೆ ಸೂರ್ಯದಯದ 6.24ರೊಳಗೆ ಮುಗಿದು ಹೋಗುತ್ತದೆ. ಅಲ್ಲಿಗೆ ಪಾಡ್ಯ 21 ಗಂಟೆ  57 ನಿಮಿಷ ಮಾತ್ರ ಇದೆ. ಹಾಗೆ ನೋಡಿದರೆ ಇದು ತಿಥಿಯ ಕನಿಷ್ಟ ಪ್ರಮಾಣವಲ್ಲ, ಒಂದು ತಿಥಿ ಕನಿಷ್ಟ 21 ಗಂಟೆ 34 ನಿಮಿಷ ಮಾತ್ರ ಇರುವುದು ಸಾಧ್ಯವಿದೆ.

ಒಂದು ವರ್ಷದಲ್ಲಿ ಇಂತಹ ಹದಿಮೂರು ಕ್ಷಯ ತಿಥಿಗಳು ಬಂದೇ ಬರುತ್ತವೆ. ಧರ್ಮಸಿಂಧುವಿನ ಪ್ರಕಾರ ಕ್ಷಯ ತಿಥಿಗಳಲ್ಲಿ ಹಬ್ಬದ ಆಚರಣೆ ಇಲ್ಲ. ಆದರೆ ಈ ವರ್ಷ ಮರುದಿನ ಸೂರ್ಯೋದಯದ ನಂತರ ಪಾಡ್ಯವು ಸಿಕ್ಕದೇ ಇರುವುದರಿಂದ ಮಾಧವಾಚಾರ್ಯರ ಮತದಂತೆ ಅಮಾವಾಸ್ಯೆಯ ನಂತರದ ಪಾಡ್ಯದಲ್ಲಿ ಯುಗಾದಿ ಆಚರಣೆ ಗ್ರಾಹ್ಯವಾಗಿದೆ. ಭಾರತೀಯ ಪಂಚಾಂಗ ಗಣಿತದಲ್ಲಿ ಅತಿ ಮುಖ್ಯವಾದದ್ದು ಸೂರ್ಯ ದಿನ ಮತ್ತು ಚಂದ್ರದಿನಗಳ ವ್ಯತ್ಯಾಸದ ಸರಿದೂಗಿಸುವಿಕೆ. ಈ ಹಿನ್ನೆಲೆಯಲ್ಲಿ ಪ್ರತಿ ಹಬ್ಬಕ್ಕೂ ಒಂದು ಆವರಣ ರೂಪುಗೊಂಡಿದೆ. ಅದರಂತೆ ಮಾರ್ಚ್ 19ರಿಂದ ಏಪ್ರಿಲ್‌ 19ರ ಒಳಗೆ ಚಾಂದ್ರಮಾನ ಯುಗಾದಿ ಬರುತ್ತದೆ. ಅಂದರೆ ಈ ವರ್ಷದ ಯುಗಾದಿ ಮಾಪಕದಲ್ಲಿ ಅತ್ಯಂತ ಕನಿಷ್ಟ ದಿನ. ಇದರ ಅರ್ಥ ಚಾಂದ್ರ ಮತ್ತು ಸೂರ್ಯ ದಿನಗಳ ಅಂತರ ಅತಿ ಹೆಚ್ಚಾಗಿದೆ ಎಂದು. ಈ ವರ್ಷ ಜ್ಯೇಷ್ಟ ಅಧಿಕ ಬರುವುದರಿಂದ ಇದು ಕೆಲಮಟ್ಟಿಗೆ ಸರಿದೂಗುತ್ತದೆ. ಆದರೆ ಅಂತರ ಪೂರ್ಣ ಸರಿ ಹೋಗುವುದು 2028ಕ್ಕೆ ಅಲ್ಲಿಗೆ 4,537 ದಿನಗಳ ಮಾಪಕ ಸರಿಹೊಂದುತ್ತದೆ. ಇದು ಲೆಕ್ಕಾಚಾರಕ್ಕೆ ಸಂಬಂಧಪಟ್ಟ ವಿಷಯವಾಗಿದೆ.

ಇಲ್ಲೊಂದು ಕುತೂಹಲಕರ ಅಂಶವಿದೆ. ಜಗತ್ತಿನ ಎಲ್ಲಾ ಕ್ಯಾಲೆಂಡರ್‌ಗಳ ನಿರ್ಣಯದಲ್ಲಿ ಮುಖ್ಯಪಾತ್ರ ವಹಿಸುವುದು ವಸಂತ ವಿಷವತ್ತು, (Vernal equinox) ಇದು ಯಾವಾಗಲೂ ಮಾರ್ಚ್ 21ಕ್ಕೆ ಬರುತ್ತದೆ. ಈ ವರ್ಷದ ಚಾಂದ್ರಮಾನ ಯುಗಾದಿ ಅದಕ್ಕಿಂತಲೂ ಮುಂಚೆ ಬಂದಿದೆ. ಖಗೋಳ ವಿಜ್ಞಾನದ ದೃಷ್ಟಿಯಿಂದ ಇದು ತಪ್ಪು ಲೆಕ್ಕಾಚಾರ. ಆದರೆ ಇದು ಬಂದಿರುವುದು ನಿರಯಣ ಲೆಕ್ಕಾಚಾರದಲ್ಲಿ,  ಇದಕ್ಕೆ ಹಿನ್ನೆಲೆಯಾದ ಸೂತ್ರಗಳು ರೂಪುಗೊಂಡಾಗ (ಅಂದರೆ ಕ್ರಿ.ಶ 100ರಲ್ಲಿ) ವಸಂತ ವಿಷವತ್ತು ಮಾರ್ಚ್ 17ರಂದು ಬರುತ್ತಿತ್ತು. ಹೀಗಾಗಿ ಈ ಸೂತ್ರಗಳ ಅನ್ವಯ ಬಂದಿದೆ. ಈಗ ವಸಂತ ವಿಷವತ್ತು ಮೇಷ ರಾಶಿಯಲ್ಲಿಲ್ಲದೆ ಮೀನ ರಾಶಿಗೆ ಬಂದಿದೆ. ಕ್ರಿ.ಶ 2,250ಕ್ಕೆ ಇದು ಕುಂಭ ರಾಶಿಗೆ ಹೋಗುತ್ತದೆ. ಭಾರತೀಯ ಪಂಚಾಂಗ ಗಣಿತದಲ್ಲಿ ನಿರಯನ ಮತ್ತು ಸಾಯನ ಎರಡೂ ಬಳಕೆಯಾಗುವುದರಿಂದ ಈ ವ್ಯತ್ಯಾಸ ಪಂಚಾಂಗ ಗಣಿತ ಮಾಡುವವರಿಗೆ ಗೊತ್ತಿರಲೇಬೇಕಿದೆ.

ಇನ್ನು ಯುಗಾದಿ ಆಚರಣೆಗೆ ಬಂದರೆ ಮಾಧವಾಚಾರ್ಯರ ಸೂತ್ರದ ಅನ್ವಯ ಯುಗಾದಿಯ ಮೊದಲ ಮಹೂರ್ತ ಅವಾವಾಸ್ಯೆ ಜೊತೆಗೂಡಿರುವುದರಿಂದ ಆಚರಣೆಗೆ ಯೋಗ್ಯವಲ್ಲ. ಎರಡನೆಯ ಮಹೂರ್ತದಲ್ಲಿಯೇ ಯುಗಾದಿ ಆಚರಿಸ ಬೇಕು (ಬೆ.9.04ರಿಂದ 10.43) ಮೂರನೆಯ ಮಹೂರ್ತವು ತಿಥಿ ಕ್ಷಯವಾದ ಕಾರಣ ನಿಶಿದ್ಧವಾಗಿದೆ. ʼಉಪೋಷ್ಯಾಪಾಡ್ಯ ಶುದ್ಧೇʼ ಶ್ಲೋಕದ ಅನ್ವಯ ಸೂರ್ಯದೋದಯದಲ್ಲಿ ಅಮಾವಾಸ್ಯೆ ಇದ್ದರೂ ಕೂಡ ಸಂಕಲ್ಪದಲ್ಲಿ ಪಾಡ್ಯ ಎಂದೇ ಹೇಳಬೇಕು. ಇಂತಹ ಪ್ರಸಂಗಗಳು ಆಚರಣೆಗೆ ಕಷ್ಟವೆನ್ನಿಸುವಂತೆ ಪಂಚಾಗಕರ್ತರಿಗೆ ಸವಾಲಿನದು ಏಕೆಂದರೆ ಈ ಸಮಯದಲ್ಲಿ ಲೆಕ್ಕಾಚಾರವನ್ನು ಬಹಳ ನಾಜೂಕಾಗಿ ಮಾಡಬೇಕಾಗುತ್ತದೆ.


Share It

You cannot copy content of this page