ಕೆ. ರಾಧಾಕೃಷ್ಣ ಹೊಳ್ಳ, ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ, 98450 29553
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇತ್ತೀಚಿನ ಯುದ್ಧ ಪರಿಸ್ಥಿತಿ ಮತ್ತು ಭೂರಾಜಕೀಯ ಉದ್ವಿಗ್ನತೆ ಜಾಗತಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹಲವಾರು ದೇಶಗಳ ವಾಯುಪ್ರದೇಶಗಳಲ್ಲಿ ನಿರ್ಬಂಧಗಳು, ವಿಮಾನ ಮಾರ್ಗ ಬದಲಾವಣೆಗಳು ಹಾಗೂ ಅಚಾನಕ್ ವಿಮಾನ ರದ್ದಾತಿಗಳು ಹೆಚ್ಚುತ್ತಿರುವುದರಿಂದ ಜಾಗತಿಕ ವಿಮಾನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಇದರ ಪರಿಣಾಮವಾಗಿ ಯುರೋಪ್, ಏಷ್ಯಾ ಮತ್ತು ಆಫ್ರಿಕಾ ನಡುವಿನ ಹಲವಾರು ವಿಮಾನ ಮಾರ್ಗಗಳಲ್ಲಿ ಪ್ರಯಾಣ ವೆಚ್ಚವೂ ಗಣನೀಯವಾಗಿ ಏರಿಕೆಯಾಗಿದೆ.
ಭಾರತದ ದೃಷ್ಟಿಯಿಂದ ಈ ಪರಿಸ್ಥಿತಿ ವಿಶೇಷವಾಗಿ ಗಂಭೀರವಾಗಿದೆ. ಭಾರತದಿಂದ ವಿಶ್ವದ ಅನೇಕ ದೇಶಗಳಿಗೆ ಹೋಗುವ ವಿಮಾನ ಸಂಚಾರವು ಬಹುಪಾಲು ಮಧ್ಯಪ್ರಾಚ್ಯದ ಪ್ರಮುಖ ಹಬ್‌ಗಳಾದ ದುಬೈ, ದೋಹಾ ಮತ್ತು ಅಬುಧಾಬಿ ಮೂಲಕ ಸಾಗುತ್ತದೆ. ಈ ಮಾರ್ಗಗಳಲ್ಲಿ ಉಂಟಾಗಿರುವ ವ್ಯತ್ಯಯಗಳಿಂದ ವಿಮಾನ ಸೇವೆಗಳ ವೇಳಾಪಟ್ಟಿಯಲ್ಲಿ ಬದಲಾವಣೆಗಳು ಕಂಡುಬರುತ್ತಿದ್ದು, ಪ್ರಯಾಣ ವೆಚ್ಚ ಹೆಚ್ಚಳದಿಂದ ಅನೇಕರು ತಮ್ಮ ಪ್ರಯಾಣವನ್ನು ಮುಂದೂಡಲು ಅಥವಾ ರದ್ದುಗೊಳಿಸಲು ಮುಂದಾಗುತ್ತಿದ್ದಾರೆ.
ಸಾಮಾನ್ಯವಾಗಿ ಅರಬ್ ರಾಷ್ಟ್ರಗಳು ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಪ್ರತಿದಿನವೂ ಸುಮಾರು 25 ರಿಂದ 30 ವಿಮಾನಗಳು ಪ್ರಯಾಣಿಕರನ್ನು ಬೆಂಗಳೂರಿಗೆ ಕರೆತರುತ್ತಿದ್ದವು. ಆದರೆ ಇತ್ತೀಚಿನ ಯುದ್ಧ ಪರಿಸ್ಥಿತಿ ಮತ್ತು ಆಕ್ರಮಣಕಾರಿ ಭದ್ರತಾ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಅನೇಕ ವಿಮಾನ ಕಂಪನಿಗಳು ತಮ್ಮ ಹಾರಾಟವನ್ನು ಸ್ಥಗಿತಗೊಳಿಸಿರುವುದರಿಂದ ಈ ಸಂಪರ್ಕ ಗಂಭೀರವಾಗಿ ಕುಂಠಿತವಾಗಿದೆ. ಇದರ ಪರಿಣಾಮವಾಗಿ ದೇಶಾದ್ಯಂತ ವಿಮಾನಯಾನ ಪ್ರಯಾಣಿಕರ ಸಂಖ್ಯೆಯಲ್ಲಿ ಸುಮಾರು 40%ರವರೆಗೆ ಕುಸಿತ ಕಂಡುಬಂದಿದ್ದು, ಬೆಂಗಳೂರಿನಂತಹ ಪ್ರಮುಖ ಅಂತರರಾಷ್ಟ್ರೀಯ ಪ್ರವೇಶ ದ್ವಾರಕ್ಕೆ ಇದು ನೇರ ಹೊಡೆತ ನೀಡಿದೆ. ಮಧ್ಯಪ್ರಾಚ್ಯ ಪ್ರದೇಶವು ಭಾರತೀಯ ಪ್ರವಾಸಿಗರಿಗಾಗಿ ಪ್ರಮುಖ ಕೇಂದ್ರವಾಗಿದೆ. ಪ್ರತಿ ವರ್ಷ ಸುಮಾರು 8 ರಿಂದ 9 ಮಿಲಿಯನ್ ಭಾರತೀಯರು ಗಲ್ಫ್ ರಾಷ್ಟ್ರಗಳಿಗೆ ಪ್ರಯಾಣಿಸುತ್ತಾರೆ, ಜೊತೆಗೆ ಸುಮಾರು 13 ಮಿಲಿಯನ್ ಭಾರತೀಯರು ಆ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಮತ್ತು ಉದ್ಯೋಗದಲ್ಲಿದ್ದಾರೆ. ಈ ನಿರಂತರ ಸಂಚಾರದಲ್ಲಿ ಉಂಟಾಗುವ ವ್ಯತ್ಯಯವು ಭಾರತದ ಪ್ರವಾಸೋದ್ಯಮ ಮತ್ತು ವಿಮಾನಯಾನ ಕ್ಷೇತ್ರಕ್ಕೆ ಗಂಭೀರ ಪರಿಣಾಮ ಬೀರುತ್ತದೆ.
ಇದರ ಜೊತೆಗೆ ವೈದ್ಯಕೀಯ ಪ್ರವಾಸೋದ್ಯಮಕ್ಕೂ ಇದರಿಂದ ಹೊಡೆತ ಬೀಳುವ ಸಾಧ್ಯತೆ ಇದೆ. ಭಾರತವು ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡುವ ದೇಶವಾಗಿ ಜಾಗತಿಕವಾಗಿ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಸುಮಾರು 6 ರಿಂದ 7 ಲಕ್ಷ ವಿದೇಶಿ ರೋಗಿಗಳು ಚಿಕಿತ್ಸೆಗಾಗಿ ಭಾರತಕ್ಕೆ ಬರುತ್ತಾರೆ, ಇವರಲ್ಲಿ ಗಮನಾರ್ಹ ಸಂಖ್ಯೆಯವರು ಗಲ್ಫ್ ರಾಷ್ಟ್ರಗಳಿಂದ ಆಗಿರುತ್ತಾರೆ. ವಿಮಾನ ಸಂಚಾರದಲ್ಲಿ ಉಂಟಾಗಿರುವ ಅಡಚಣೆಗಳು ಮತ್ತು ಹೆಚ್ಚುತ್ತಿರುವ ಪ್ರಯಾಣ ವೆಚ್ಚದಿಂದ ಈ ಕ್ಷೇತ್ರವೂ ಕುಸಿತ ಎದುರಿಸುವ ಸಾಧ್ಯತೆ ಇದೆ.
ಮೋಜು ಮಸ್ತಿಗೆ ಬ್ರೇಕ್:
ಈ ಎಲ್ಲಾ ಬೆಳವಣಿಗೆಗಳ ನೇರ ಪರಿಣಾಮ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸಾರಿಗೆ ಕ್ಷೇತ್ರದಲ್ಲಿಯೂ ಕಾಣಿಸುತ್ತಿದೆ. ಅಂತಾರಾಷ್ಟ್ರೀಯ ಪ್ರವಾಸಿಗರು, ವಿಶೇಷವಾಗಿ ಬಿಸಿನೆಸ್ ಮತ್ತು ಹೈಎಂಡ್ ಪ್ರವಾಸಿಗರು, ಲಕ್ಸುರಿ ಟ್ಯಾಕ್ಸಿ ಮತ್ತು ಪ್ರವಾಸಿ ವಾಹನ ಸೇವೆಗಳ ಪ್ರಮುಖ ಗ್ರಾಹಕರು. ಆದರೆ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ ಕಂಡುಬರುತ್ತಿರುವುದರಿಂದ ಹಲವಾರು ಲಕ್ಸುರಿ ಟ್ಯಾಕ್ಸಿಗಳು ಮತ್ತು ಪ್ರವಾಸಿ ವಾಹನಗಳು ಈಗ ನಿಂತಂತೆಯೇ ಇರುವ ಪರಿಸ್ಥಿತಿ ಉಂಟಾಗಿದೆ. ಟ್ರಾವೆಲ್ ಏಜೆನ್ಸಿಗಳು ಮತ್ತು ಪ್ರವಾಸ ವ್ಯವಸ್ಥಾಪಕರಿಗೂ ಬುಕ್ಕಿಂಗ್ ರದ್ದಾತಿಗಳ ಪ್ರಮಾಣ ಹೆಚ್ಚುತ್ತಿದೆ.
ಅಂತಾರಾಷ್ಟ್ರೀಯ ಪ್ರಯಾಣಿಕರ ಕೊರತೆ:
ಇದರ ಜೊತೆಗೆ, ಹೆಚ್ಚಿನ ಅಂತಾರಾಷ್ಟ್ರೀಯ ಪ್ರಯಾಣಿಕರು ಬೆಂಗಳೂರು ನಗರವನ್ನು ಅವಲಂಬಿಸಿಕೊಂಡಿರುವುದರಿಂದ ಕರ್ನಾಟಕದ ಟ್ರಾವೆಲ್ಸ್ ಉದ್ಯಮಿಗಳಿಗೆ ಇನ್ನಷ್ಟು ಗಂಭೀರ ಹೊಡೆತ ಬಿದ್ದಿದೆ. ಬೆಂಗಳೂರು ಮೂಲಕವೇ ರಾಜ್ಯದ ವಿವಿಧ ಪ್ರವಾಸಿ ತಾಣಗಳಿಗೆ ಪ್ರಯಾಣಿಸುವ ಹೈ-ವ್ಯಾಲ್ಯೂ ವಾಹನ ಬಳಕೆ ಮಾಡುವ ಪ್ರವಾಸಿಗರ ಕೊರತೆಯಿಂದ ಟ್ರಾವೆಲ್ಸ್ ಕಂಪನಿಗಳು, ಲಕ್ಸುರಿ ಕಾರ್ ಸೇವೆಗಳು ಮತ್ತು ಚಾಲಕರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ವ್ಯಾಪಕ ಆರ್ಥಿಕ ಪರಿಣಾಮ:
ಭಾರತದ ಆರ್ಥಿಕತೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವು ಮಹತ್ವದ ಪಾತ್ರವಹಿಸುತ್ತದೆ. ಈ ಕ್ಷೇತ್ರವು ದೇಶದ ಒಟ್ಟು ಆರ್ಥಿಕ ಉತ್ಪಾದನೆಯ ಸುಮಾರು 5–6 ಶೇಕಡಾ ಪಾಲು ನೀಡುವುದರ ಜೊತೆಗೆ 4 ಕೋಟಿ ಜನರಿಗೆ ನೇರ ಹಾಗೂ ಪರೋಕ್ಷ ಉದ್ಯೋಗವನ್ನು ಒದಗಿಸುತ್ತದೆ. ಆದ್ದರಿಂದ ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಉಂಟಾಗುವ ಯಾವುದೇ ದೊಡ್ಡ ವ್ಯತ್ಯಯವು ಆರ್ಥಿಕವಾಗಿ ವ್ಯಾಪಕ ಪರಿಣಾಮ ಬೀರುವ ಸಾಧ್ಯತೆ ಇದೆ.
ಕೊರೋನಾ ನಂತರ ಮತ್ತೊಂದು ಸವಾಲು:
ಕೊರೋನಾ ಮಹಾಮಾರಿಯಿಂದ ಭಾರೀ ಹೊಡೆತ ಅನುಭವಿಸಿದ ನಂತರ ಇದೀಗಷ್ಟೇ ಚೇತರಿಕೆ ಕಂಡುಕೊಳ್ಳುತ್ತಿದ್ದ ಪ್ರವಾಸೋದ್ಯಮ ಮತ್ತು ಟ್ರಾವೆಲ್ಸ್ ಕ್ಷೇತ್ರಕ್ಕೆ ಮಧ್ಯಪ್ರಾಚ್ಯದ ಈ ಸಂಘರ್ಷ ಮತ್ತೊಂದು ದೊಡ್ಡ ಸವಾಲಾಗಿ ಎದುರಾಗಿದೆ. ಈ ಪರಿಸ್ಥಿತಿ ಮುಂದುವರಿದರೆ ಟ್ರಾವೆಲ್ಸ್ ಮಾಲೀಕರು, ಚಾಲಕರು, ಟೂರ್ ಆಪರೇಟರ್‌ಗಳು ಹಾಗೂ ಈ ಕ್ಷೇತ್ರದ ಮೇಲೆ ಅವಲಂಬಿತವಾಗಿರುವ ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೂ ಗಂಭೀರ ಪರಿಣಾಮ ಬೀರುವ ಸಂಭವವಿದೆ.
ತಕ್ಷಣದ ರಿಲೀಫ್ ಕ್ರಮಗಳು ಅಗತ್ಯ:
ಮಧ್ಯಪ್ರಾಚ್ಯದ ಅಶಾಂತಿ ಕೇವಲ ಆ ಪ್ರದೇಶಕ್ಕೆ ಸೀಮಿತವಾಗಿಲ್ಲ; ಅದು ಭಾರತದ ಆರ್ಥಿಕತೆಯ ಪ್ರಮುಖ ಅಂಗವಾಗಿರುವ ಪ್ರವಾಸೋದ್ಯಮ ಮತ್ತು ಸಾರಿಗೆ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಈ ಸಂಕಷ್ಟವನ್ನು ಎದುರಿಸಲು ತಕ್ಷಣದ ನೀತಿ ಹಸ್ತಕ್ಷೇಪ, ಹಣಕಾಸು ಸಹಾಯ ಮತ್ತು ಉದ್ಯಮಕ್ಕೆ ರಿಲೀಫ್ ಕ್ರಮಗಳು ಅಗತ್ಯವಾಗಿದೆ.
