News

ಡಿಜಿಪಿ ರಾಮಚಂದ್ರರಾವ್ ಇರುವ ಅಸಭ್ಯ ವಿಡಿಯೋ ಅಸಲಿ; ಸರ್ಕಾರಕ್ಕೆ ಸಲ್ಲಿಕೆಯಾದ ವರದಿ

Share It

ಬೆಂಗಳೂರು: ಮಹಿಳೆಯರೊಂದಿಗೆ ಡಿಜಿಪಿ ಕೆ.ರಾಮಚಂದ್ರರಾವ್ ಅಸಭ್ಯ ವಿಡಿಯೊ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ವೈರಲ್ ಆಗಿದ್ದ ವಿಡಿಯೋ ಎಐ ಹಾಗೂ ಡೀಫ್ ಪೇಕ್ ಅಲ್ಲ. ಅಸಲಿ ವಿಡಿಯೋ ಆಗಿದೆ ಎಂದು ಸರ್ಕಾರಕ್ಕೆ ಪೊಲೀಸ್ ಇಲಾಖೆ ವರದಿ ನೀಡಿದೆ.

ಪೊಲೀಸ್ ಸಮವಸ್ತ್ರದಲ್ಲಿ ಕಚೇರಿಯಲ್ಲಿ ಮಹಿಳೆಯೊಂದಿಗೆ ರಾಮಚಂದ್ರರಾವ್ ಅಸಭ್ಯ ವರ್ತನೆ ತೋರಿರುವ ಆರೋಪ ಸಂಬಂಧ ಕಳೆದ ಜನವರಿಯಲ್ಲಿ ವಿಡಿಯೊ ವೈರಲ್ ಆಗಿತ್ತು. ಇದರಿಂದ ಇಲಾಖೆಯು ಮುಜುಗರಕ್ಕೆ ಒಳಗಾಗಿತ್ತು. ಈ ವೇಳೆ ಪ್ರತಿಕ್ರಿಯಿಸಿದ್ದ ಅವರು, ನನ್ನನ್ನು ತೇಜೋವಧೆ ಮಾಡಲು ಕಿಡಿಗೇಡಿಗಳು ಎಐ ವಿಡಿಯೋ ಹರಿಬಿಟ್ಟಿದ್ದಾರೆ ಎಂದು ಕಿಡಿಕಾರಿದ್ದರು.

ರಾಮಚಂದ್ರರಾವ್ ರನ್ನು ಅಮಾನತು ಮಾಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗೃಹ ಇಲಾಖೆ ಎಡಿಜಿಪಿ ಆರ್.ಹಿತೇಂದ್ರ ಅವರ ನೇತೃತ್ವದ ತಂಡ ರಚಿಸಿ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು. ಸದ್ಯ ತನಿಖೆ ನಡೆಸಿ 100 ಪುಟಗಳ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ವಿಡಿಯೋ ಎಐ ಅಥವಾ ಡೀಪ್ ಫೇಕ್ ಆಗಿಲ್ಲ ಎಂದು ಎಫ್.ಎಸ್.ಎಲ್ ವರದಿಯಲ್ಲಿ ದೃಢಪಟ್ಟಿದೆ.

ರಾಮಚಂದ್ರರಾವ್ ಗೆ ನೋಟಿಸ್

ವೈರಲ್ ಆಗಿದ್ದ ವಿಡಿಯೋ ನೈಜವಾಗಿದೆ. ರಾಮಚಂದ್ರರಾವ್ ಅವರು 2016-17ನೇ ಸಾಲಿನಲ್ಲಿ ಬೆಳಗಾವಿ ವಲಯ ಐಜಿಪಿ ಆಗಿದ್ದಾಗ ಈ ಘಟನೆ ನಡೆದಿದೆ. ಈ ವೇಳೆ ಕಚೇರಿ ಸಿಬ್ಬಂದಿಗಳಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಗುರುತು ಹಿಡಿಯಲಾಗಿದ್ದು, ರಾಮಚಂದ್ರರಾವ್ ಅವರ ಕಚೇರಿಗೆ ಆಗಾಗ ಬಂದು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯ ಮೇಲ್ನೊಟಕ್ಕೆ ಕೃತ್ಯವೆಸಗಿರುವುದು ಸಾಬೀತಾದ ಹಿನ್ನೆಲೆ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್ ) ರಾಮಚಂದ್ರರಾವ್ ಅವರಿಗೆ ನೋಟಿಸ್ ನೀಡಿದೆ.


Share It

You cannot copy content of this page