News

ನೀವು ಸೇವಕಿಯನ್ನು ಮದುವೆಯಾಗಿಲ್ಲ; ಗಂಡನೂ ಅಡುಗೆ ಮಾಡಬೇಕು, ಪಾತ್ರೆ ತೊಳೆಯಬೇಕು: ಸುಪ್ರೀಂಕೋರ್ಟ್

Share It

ಹೆಂಡತಿ ಅಡುಗೆ ಮಾಡುತ್ತಿಲ್ಲ ಅಥವಾ ಮನೆಗೆಲಸ ಮಾಡುತ್ತಿಲ್ಲ ಎನ್ನುವ ಆರೋಪಗಳು ಕ್ರೌರ್ಯಕ್ಕೆ ಸಮನಾಗಲಾರದು ಎಂದು ಸುಪ್ರೀಂಕೋರ್ಟ್ ನಿನ್ನೆ ಶುಕ್ರವಾರ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಲ್ಲದೇ, ನೀವು ಸೇವಕಿಯನ್ನು ಮದುವೆಯಾಗಿಲ್ಲ, ಬಾಳ ಸಂಗಾತಿಯನ್ನು ವರಿಸಿದ್ದೀರಿ. ಕಾಲ ಬದಲಾಗಿದೆ. ಅಂತಹ ಸಂಬಂಧಗಳಿಗೆ ನೀವೂ ಕೊಡುಗೆ ನೀಡಬೇಕು ಎಂದು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಹೇಳಿದ್ದಾರೆ.

ಮತ್ತೋರ್ವ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು, ಸಮಯ ಹಿಂದಿಗಿಂತ ವಿಭಿನ್ನವಾಗಿದೆ. ನೀವು ಕೂಡ ಅಡುಗೆ ಮಾಡಲು, ಬಟ್ಟೆ ಪಾತ್ರೆ ತೊಳೆಯಲು ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.

ಅಲ್ಲದೇ ದಂಪತಿ ನಡುವಿನ ವಿರಸ ಮಧ್ಯಸ್ಥಿಕೆಯಲ್ಲೂ ಸರಿಹೋಗದ ಕಾರಣ ಇಬ್ಬರೂ ಮುಂದಿನ ವಿಚಾರಣೆ ವೇಳೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಹೇಳಿದೆ.

ಹಿನ್ನೆಲೆ: ಪ್ರಕರಣದಲ್ಲಿನ ದಂಪತಿ 2017 ರಲ್ಲಿ ವಿವಾಹವಾಗಿದ್ದು, ಅವರಿಗೆ 8 ವರ್ಷದ ಮಗನಿದ್ದಾನೆ. ಪತಿ ಸರ್ಕಾರಿ ಶಾಲೆ ಶಿಕ್ಷಕನಾಗಿದ್ದರೆ, ಪತ್ನಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಾಂಪತ್ಯದಲ್ಲಿ ಅಸಮಾಧಾನ, ವಿರಸ ಹೆಚ್ಚಾಗಿದ್ದರಿಂದ ಪತಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಗಂಡ, ಪತ್ನಿ ಮದುವೆಯಾದ ಕೆಲ ದಿನಗಳಲ್ಲೇ ತನ್ನ ವರ್ತನೆ ಬದಲಾಯಿಸಿದಳು. ಜತೆಗೆ ಕೀಳಾಗಿ ನಡೆಸಿಕೊಳ್ಳಲು ಆರಂಭಿಸಿದಳು. ತನ್ನನ್ನೂ ತನ್ನ ಕುಟುಂಬದವರನ್ನೂ ನಿಂದಿಸಿದಳು. ನಮಗೆ ಅಡುಗೆ ಮಾಡಿಕೊಡಲು ನಿರಾಸರಿಸಿದಳು. ತನ್ನ ಮಗ ಹುಟ್ಟಿದಾಗ ತೊಟ್ಟಿಲು ಶಾಸ್ತ್ರಕ್ಕೆ ನನ್ನನ್ನು ಕರೆಯದೇ ಅಪಮಾನಿಸಿದಳು ಎಂದು ಆರೋಪಿಸಿದ್ದರು.

ಇನ್ನು ಪತ್ನಿ ಗಂಡನ ಮನೆಯವರಿಗೆ ತಿಳಿಸಿ, ಅವರ ಒಪ್ಪಿಗೆ ಪಡೆದೇ ತವರು ಮನೆಗೆ ಮಗು ಹುಟ್ಟಿದ ನಂತರ ಬಾಣಂತನಕ್ಕೆ ಹೋಗಿದ್ದೆ. ಹೀಗಿದ್ದೂ ಮಗನ ತೊಟ್ಟಿಲು ಶಾಸ್ತ್ರಕ್ಕೆ ಗಂಡನ ಮನೆಯವರು ಯಾರೂ ಬರಲಿಲ್ಲ. ಬದಲಿಗೆ ಗಂಡನ ಪೋಷಕರು ಹಣ ಒಡವೆ ನೀಡುವಂತೆ ಒತ್ತಾಯಿಸಿದರು. ನನ್ನ ಸಂಬಳದಲ್ಲಿ ಇಂತಿಷ್ಟು ನೀಡುವಂತೆ ಒತ್ತಾಯಿಸಿದರು ಎಂದು ಆರೋಪಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ಪತಿಯ ಮನವಿಯಂತೆ ದಂಪತಿಗೆ ವಿಚ್ಛೇದನ ನೀಡಿ ಆದೇಶಿಸಿತ್ತು. ಇದನ್ನು ಪತ್ನಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್ ವಿಚ್ಛೇದನ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಇದೀಗ ಪತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.


Share It

You cannot copy content of this page