ಜೀವಂತ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿ, ಅದನ್ನು ರದ್ದುಪಡಿಸಲು ವಿಳಂಬ ಮಾಡುತ್ತಿರುವ ಬಿಬಿಎಂಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಜೀವಂತವಾಗಿರುವ ವ್ಯಕ್ತಿ ಹೆಸರಿನಲ್ಲಿ ನೀಡಿರುವ ಮರಣ ಪ್ರಮಾಣ ಪತ್ರ ರದ್ದುಪಡಿಸುತ್ತಿಲ್ಲ ಎಂದರೆ ಹೇಗೆ? ಬುಧವಾರದೊಳಗೆ ಮರಣ ಪ್ರಮಾಣ ಪತ್ರ ರದ್ದುಪಡಿಸಿರುವ ಹಿಂಬರಹ ಸಲ್ಲಿಸಬೇಕು ಎಂದು ಬಿಬಿಎಂಪಿಯ ಜನನ ಮತ್ತು ಮರಣ ನೋಂದಣಾಧಿಕಾರಿಗೆ ತಾಕೀತು ಮಾಡಿದೆ.
ಬೆಂಗಳೂರಿನ ಚಿಕ್ಕಪೇಟೆಯ ವಲಯ ಕಚೇರಿಯ ಜನನ ಮತ್ತು ಮರಣ ನೋಂದಣಾಧಿಕಾರಿಯು 23.04.2025ರಂದು ನೀಡಿರುವ ತಾತ್ಕಾಲಿಕ ಮರಣ ಪ್ರಮಾಣ ಪತ್ರವನ್ನು ರದ್ದುಪಡಿಸಲು ನಿರ್ದೇಶಿಸಬೇಕು ಎಂದು ಕೋರಿ ಡಿ ಮೆಹಬೂಬ್ ಬಾಷಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರ ಬಾಷಾ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ಜೀವಂತವಾಗಿದ್ದಾರೆ. ಹಾಗಿದ್ದೂ, ಮರಣ ಪ್ರಮಾಣ ಪತ್ರ ನೀಡಲಾಗಿದೆ. ಅರ್ಜಿದಾರರು ಬದುಕಿದ್ದಾರೆ ಅವರ ಪ್ಯಾನ್, ಆಧಾರ್ ಕಾರ್ಡ್ ಎಲ್ಲವೂ ಇದೆ. ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಗೆ ಸಂಪರ್ಕಿಸಲಾಗಿದೆ. ಇದರಿಂದಾಗಿ ಈಗ ಅರ್ಜಿದಾರರು ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಮರಣ ಪ್ರಮಾಣ ಪತ್ರ ನೀಡಿರುವುದನ್ನು ರದ್ದುಪಡಿಸುವಂತೆ ಕಳೆದ ವರ್ಷ ಆದೇಶಿಸಲಾಗಿದೆ. ಇದನ್ನು ಪಾಲಿಸದೇ ಇರುವುದರಿಂದ ದಂಡ ಏಕೆ ವಿಧಿಸಬಾರದು ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು. ಅಲ್ಲದೇ, ಜನನ ಮತ್ತು ಮರಣಗಳ ನೋಂದಣಾಧಿಕಾರಿ ಅವರು ಬುಧವಾರದೊಳಗೆ ಮರಣ ಪ್ರಮಾಣಪತ್ರ ರದ್ದುಪಡಿಸಿರುವ ಕುರಿತಂತೆ ಹಿಂಬರಹ ಸಲ್ಲಿಸಬೇಕು. ಇಲ್ಲವಾದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲದೇ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿಯ ಜನನ ಮತ್ತು ಮರಣ ನೋಂದಣಾಧಿಕಾರಿ, ಕಿದ್ವಾಯಿ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ, ಚಿಕ್ಕಪೇಟೆಯ ವೈದ್ಯಾಧಿಕಾರಿ, ಬಿಬಿಎಂಪಿಯ ಸಾಂಖ್ಯಿಕ ವಿಭಾಗದ ಜಂಟಿ ನಿರ್ದೇಶಕರಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.
