News

ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ: ಸದಸ್ಯರ ಸಂಖ್ಯೆ ಅಂತಿಮಗೊಳಿಸಲು ಹೈಕೋರ್ಟ್ ಸೂಚನೆ

Share It

ಮುಂದಿನ ಒಂದು ತಿಂಗಳಲ್ಲಿ ಗ್ರಾಮ ಪಂಚಾಯಿತಿಗಳ ಒಟ್ಟು ಸದಸ್ಯರ ಸಂಖ್ಯೆಯನ್ನು ನೋಟಿಫೈ ಮಾಡಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಇದೇ ವೇಳೆ ಗ್ರಾಮ ಪಂಚಾಯಿತಿ ಸದಸ್ಯರ ಅವಧಿ ಮುಗಿಯುವುದರೊಳಗೇ ಈ ಪ್ರಕ್ರಿಯೆ ಮುಗಿಸಬೇಕಿತ್ತು ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯದ 5,950 ಗ್ರಾಮ ಪಂಚಾಯಿತಿಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸಲು ಪೂರಕವಾಗಿ ಅಂತಿಮ ಮೀಸಲು ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಪ್ರತಿಮಾ ಹೊನ್ನಾಪುರ ಅವರು ವಾದ ಮಂಡಿಸಿ, ರಾಜ್ಯದಲ್ಲಿರುವ ಗ್ರಾಮ ಪಂಚಾಯ್ತಿಗಳಲ್ಲಿ ಪ್ರಸ್ತುತ 96 ಸಾವಿರಕ್ಕೂ ಸದಸ್ಯ ಸ್ಥಾನಗಳಿವೆ. ಈಗಿನ ಜನಸಂಖ್ಯೆ ಆಧರಿಸಿ ಒಟ್ಟು ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆ ನಿಗದಿಪಡಿಸಲು ನಾಲ್ಕು ವಾರ ಕಾಲಾವಕಾಶ ಬೇಕಾಗುತ್ತದೆ.‌ ಅದೇ ರೀತಿ‌ ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ಮೀಸಲು ಪ್ರಕ್ರಿಯೆ ಪೂರ್ಣಗೊಳಿಸಲು ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. ವಾದ ಆಲಿಸಿದ ಪೀಠವು ವಿಚಾರಣೆಯನ್ನು ಏಪ್ರಿಲ್‌ 29ಕ್ಕೆ ಮುಂದೂಡಿತು.


Share It

You cannot copy content of this page