News

ಗಂಡ ಹೆಂಡತಿ ಒಂದೇ ಮನೆಯಲ್ಲಿದ್ದಾರೆ ಎಂಬ ಕಾರಣಕ್ಕೆ ವಿಚ್ಛೇದನ ನಿರಾಕರಿಸಲಾಗದು-ಹೈಕೋರ್ಟ್

Share It

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.

ಬೆಂಗಳೂರು: ಗಂಡ ಹೆಂಡತಿ ಒಂದೇ ಮನೆಯಲ್ಲಿ ವಾಸವಿದ್ದಾರೆ ಎಂಬ ಕಾರಣಕ್ಕೆ ಅವರ ವಿಚ್ಛೇದನ ಕೋರಿಕೆಯನ್ನು ತಿರಸ್ಕರಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೇ, ಪತಿ-ಪತ್ನಿ ಒಂದೇ ಮನೆಯಲ್ಲಿ ವಾಸವಿದ್ದಾರೆ ಎಂಬ ಕಾರಣಕ್ಕೆ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿದ್ದ ದಂಪತಿಯ ಮನವಿ ತಿರಸ್ಕರಿಸಿದ್ದ ಕೌಟುಂಬಿಕ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಹೈಕೋರ್ಟ್ ತನ್ನ ಆದೇಶದಲ್ಲಿ, ಈ ಪ್ರಕರಣದಲ್ಲಿ ಪತಿ-ಪತ್ನಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿದ್ದಾರೆ. ವೈಮನ್ಯ ಇದ್ದರೂ ಒಂದೇ ಮನೆಯಲ್ಲಿ ವಾಸಿಸುತ್ತಿರುವುದು ಅವರ ಸುಸಂಸ್ಕೃತಿಯನ್ನು ತೋರಿಸುತ್ತದೆ. ಹೀಗಾಗಿ ದಂಪತಿ ಒಂದೇ ಮನೆಯಲ್ಲಿ ವಾಸವಿದ್ದಾರೆ ಎಂಬ ಆಧಾರದಲ್ಲಿ ಅವರ ಮನವಿಯನ್ನು ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.

ಇದೇ ವೇಳೆ ವಿಚ್ಛೇದನ ಕೋರಿ ದಂಪತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಕೌಟುಂಬಿಕ ನ್ಯಾಯಾಲಯ 2022ರ ಅಕ್ಟೋಬರ್ 15 ರಂದು ನೀಡಿದ್ದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಿ, ರಾಜಿಸಂಧಾನದ ನಿಯಮಗಳಿಗೆ ಅನುಗುಣವಾಗಿ ಮಧ್ಯಸ್ಥಿಕೆದಾರರ ಸಮಕ್ಷಮದಲ್ಲಿ ದಂಪತಿಯ ಮನವಿಯನ್ನು ಇತ್ಯರ್ಥಪಡಿಸುವಂತೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಪತಿ-ಪತ್ನಿ ಪರಸ್ಪರ ಒಪ್ಪಿಗೆ ಮೇರೆಗೆ ವಿವಾಹ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ದಂಪತಿಯನ್ನು ಮಧ್ಯಸ್ಥಿಕೆದಾರರ ಎದುರು ಹಾಜರಾಗಲು ಸೂಚಿಸಿದ್ದ ವೇಳೆ ಉಭಯ ಪಕ್ಷಗಾರರು ತಾವು ಸಮ್ಮತಿಯ ಮೇರೆಗೆ ದೂರವಾಗಲು ನಿರ್ಧರಿಸಿರುವುದಾಗಿ ಸ್ಪಷ್ಟಪಡಿಸಿದ್ದರು. ಅದರಂತೆ ರಾಜಿ ಸಂಧಾನದ ಅರ್ಜಿಯನ್ನೂ ಸಲ್ಲಿಸಲಾಗಿತ್ತು. ಆದರೆ, ಕೌಟುಂಬಿಕ ನ್ಯಾಯಾಲಯ ಪತಿ-ಪತ್ನಿ ಒಂದೇ ಕುಟುಂಬದಲ್ಲಿ ವಾಸವಾಗಿದ್ದಾರೆ ಎಂಬ ಕಾರಣಕ್ಕೆ ವಿಚ್ಛೇದನ ನಿರಾಕರಿಸಿತ್ತು. ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.


Share It

You cannot copy content of this page