ಬೆಂಗಳೂರು: 70 ಸಾವಿರ ಕೊಟ್ಟ ಖರೀದಿಸಿದ್ದ ಟಿವಿ ಕೈಕೊಟ್ಟ ಬಳಿಕ ವಾರಂಟಿ ಪ್ರಕಾರ ಸರ್ವೀಸ್ ಕೊಡಲು ಸತಾಯಿಸಿದ ಟಿವಿ ಕಂಪನಿಗೆ ಗ್ರಾಹಕ ಕೋರ್ಟ್ ಬಿಸಿ ಮುಟ್ಟಿಸಿದೆ.
ವರ್ಷ ತುಂಬುವ ಮುನ್ನವೇ ಟಿವಿ ಹಾಳಾಗಿದ್ದು, ವಾರಂಟಿ ಪ್ರಕಾರ ಅದನ್ನು ಸರಿಪಡಿಸಿಕೊಟ್ಟಿಲ್ಲ ಎಂದು ಬೆಂಗಳೂರಿನ ಕೆ.ಆರ್ ಪುರ ನಿವಾಸಿ ವಿನೀತ್ ಕುಮಾರ್ ಎಂಬುವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರಿನ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಟಿವಿ ಸರಿಪಡಿಸಿಕೊಡುವಂತೆ ಹಾಗೂ ಗ್ರಾಹಕರಿಗೆ 3 ಸಾವಿರ ಪರಿಹಾರ ನೀಡುವಂತೆ ಆದೇಶಿಸಿದೆ.
ವಿನೀತ್ ಕುಮಾರ್ 2020ರ ಅಕ್ಟೋಬರ್ 3ರಂದು 70,900 ರೂಪಾಯಿ ಪಾವತಿಸಿ ಸ್ಯಾಮ್‌ಸಂಗ್ ಟಿವಿ ಖರೀದಿಸಿದ್ದರು. 2021ರ ಅಕ್ಟೋಬರ್ 3ಕ್ಕೆ ವಾರಂಟಿ ಮುಗಿಯುವುದಿತ್ತು. ಆದರೆ, 2021ರ ಜೂನ್‌ನಲ್ಲಿ ಟಿವಿಯ ಡಿಸ್‌ಪ್ಲೇ ಕಪ್ಪು ಬಣ್ಣಕ್ಕೆ ತಿರುಗಲಾರಂಭಿಸಿತ್ತು. ಸಮಸ್ಯೆ ಹೆಚ್ಚಾದ ಕಾರಣ ಕಂಪನಿಯ ತಂತ್ರಜ್ಞರಿಗೆ ದೂರು ನೀಡಿದ್ದರು. ಆದರೆ, ಸೂಕ್ತ ಸಮಯದಲ್ಲಿ ಸೇವೆ ನೀಡಿರಲಿಲ್ಲ.
ಅದಾದ 29 ದಿನಗಳ ಬಳಿಕ 50 ಇಂಚು ಸ್ಯಾಮ್‌ಸಂಗ್ ಟಿವಿ ಬದಲಿಗೆ 48 ಇಂಚು ಸ್ಯಾಮ್‌ಸಂಗ್ ಟಿವಿ ತಂದಿದ್ದರು ಎಂಬ ಕಾರಣಕ್ಕೆ ದೂರುದಾರರು ಅದನ್ನು ಪಡೆದುಕೊಳ್ಳಲು ಒಪ್ಪಿರಲಿಲ್ಲ. ಬಳಿಕ, ಸೇವೆ ನೀಡಲು ಸತಾಯಿಸಿದ ಸ್ಯಾಮಸಂಗ್ ವಿರುದ್ಧ ವಿನೀತ್ ಕುಮಾರ್ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
ದೂರಿನ ವಿಚಾರಣೆ ನಡೆಸಿದ ಆಯೋಗ 60 ದಿನಗಳ ಒಳಗೆ ಟಿವಿ ಪ್ಯಾನೆಲ್ ಸರಿಪಡಿಸಿಕೊಡಬೇಕು ಹಾಗೆಯೇ ಕೋರ್ಟ್ ವೆಚ್ಚವಾಗಿ ದೂರುದಾರ ಗ್ರಾಹಕರಿಗೆ 3 ಸಾವಿರ ಪರಿಹಾರ ನೀಡಬೇಕು ಆದೇಶಿಸಿದೆ.
(Complaint Case No. CC/476/2021)