-ವೇಣುಗೋಪಾಲ್ ಎಸ್.ಜಿ
ಲಿವ್ ಇನ್ ರಿಲೇಶನ್ ಶಿಪ್ ನಲ್ಲಿರುವ ಮಹಿಳೆಯರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು ಎಂದು ಇತ್ತೀಚಿನ ವಿನೀತ್ ಗಣೇಶ್ ವಿರುದ್ಧ ಪ್ರಿಯಾಂಕ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪುರುಷನೊಂದಿಗೆ ಯಾವುದೇ ಕೌಟುಂಬಿಕ ಸಂಬಂಧ ಹೊಂದಿರುವ, ಹಿಂಸೆಗೆ ಒಳಗಾದ ಮಹಿಳೆಯರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು ಎಂದು ನ್ಯಾ. ಅನಿಲ್ ಕೆ ನರೇಂದ್ರನ್ ಮತ್ತು ನ್ಯಾ. ಪಿ. ಜಿ. ಅಜಿತ್ ಕುಮಾರ್ ರವರ ವಿಭಾಗೀಯ ಪೀಠ ಹೇಳಿದೆ.
‘ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣೆ ಕಾಯ್ದೆ’ಯ ಅನುಸಾರ ಕೌಟುಂಬಿಕ ಸಂಬಂಧ ಎಂದರೆ ಎರಡು ವ್ಯಕ್ತಿಗಳು ಯಾವುದೇ ಸಮಯದಲ್ಲಿ ಒಂದೇ ಮನೆಯಲ್ಲಿ ವಾಸವಿದ್ದು, ರಕ್ತಸಂಬಂಧ, ವಿವಾಹ ಅಥವಾ ವಿವಾಹದ ರೀತಿಯ/ಸ್ವಭಾವದ ಸಂಬಂಧ ಹೊಂದಿರುವ, ದತ್ತು ಪಡೆದಿರುವ ಹಾಗೂ ಕುಟುಂಬದ ಎಲ್ಲಾ ಸದಸ್ಯರೂ ಒಟ್ಟಿಗೆ ವಾಸಿಸುವರನ್ನು ಒಳಗೊಳ್ಳುತ್ತದೆ. ಈ ವ್ಯಾಖ್ಯೆಯ ಅನುಸಾರ, ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ವಾಸಿಸುವ ಮಹಿಳೆ ಕೂಡ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪರಿಹಾರ ಪಡೆಯಬಹುದು ಎಂದು ಹೈಕೋರ್ಟ್ ಹೇಳಿದೆ.
ಈ ಕಾಯ್ದೆಯ ಕಲಂ 2 ರ ಅಡಿಯಲ್ಲಿ ವಿವಾಹದ ಸ್ವಭಾವ ಹೊಂದಿರುವ, ಲಿವ್ ಇನ್ ರಿಲೇಷನ್ಶಿಪ್ ನಲ್ಲಿರುವ ಮಹಿಳೆ ಕಲಂ 12 ರ ಅಡಿಯಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಇದೇ ವೇಳೆ ಮ್ಯಾಜಿಸ್ಟ್ರೇಟ್ ಮುಂದೆ ಬಾಕಿ ಇರುವ ಕೌಟುಂಬಿಕ ದೌರ್ಜನ್ಯ ಪ್ರಕರಣಗಳನ್ನು ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸುವಂತಿಲ್ಲ ಎಂದು ಸಹ ಸ್ಪಷ್ಟಪಡಿಸಿದೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯು ಸಂವಿಧಾನದ ಪ್ರಮುಖ ಆಶಯವಾದ ಮಹಿಳೆಯರ ಹಕ್ಕುಗಳನ್ನು ಕಾಪಾಡುತ್ತದೆ. ಮ್ಯಾಜಿಸ್ಟ್ರೇಟ್ ಮುಂದೆ ಬಾಕಿ ಇರುವ ಇಂತಹ ಪ್ರಕರಣಗಳನ್ನು ಕೌಟುಂಬಿಕ ನ್ಯಾಯಾಲಯಗಳಿಗೆ ಹಸ್ತಾಂತರಿಸಿದರೆ ಮಹಿಳೆಯ ಹಕ್ಕುಗಳಿಗೆ ಹಾನಿ ಉಂಟಾಗಲಿದೆ. ಏಕೆಂದರೆ, ಈ ಕಾಯ್ದೆಯ ಕಲಂ 12 ರ ಅಡಿಯಲ್ಲಿ ಪ್ರಕರಣವು ಕುಟುಂಬ ನ್ಯಾಯಾಲಯಕ್ಕೆ ಹಸ್ತಾಂತರವಾದರೆ ಕುಟುಂಬ ನ್ಯಾಯಾಲಯವು ವೈವಾಹಿಕ ಸಂಬಂಧಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವುದರಿಂದ ಇದು ಲಿವ್ ಇನ್ ರಿಲೇಷನ್ಶಿಪ್ ನಲ್ಲಿರುವ ಮಹಿಳೆಯರನ್ನು ವೈವಾಹಿಕ ಸಂಬಂಧದಿಂದ ಪ್ರತ್ಯೇಕಿಸುತ್ತದೆ. ಈ ನಿಟ್ಟಿನಲ್ಲಿ ಪ್ರಕರಣವನ್ನು ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿರುವ ಮನವಿಯನ್ನು ಪರಿಗಣಿಸಲಾಗದು ಎಂದು ಹೈಕೋರ್ಟ್ ಆದೇಶಿಸಿದೆ.
(TR.APPEAL (C) NO. 1 OF 2023)
