News

ಜಪ್ತಿ ಮಾಡಿದ ವಾಹನಗಳ ಬಿಡುಗಡೆ ಗೊಂದಲ ನಿವಾರಿಸಿದ ಹೈಕೋರ್ಟ್

Share It

ಬೆಂಗಳೂರು: ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್‌) ಅಡಿ ಜಪ್ತಿ ಮಾಡಿದ ವಾಹನಗಳನ್ನು ಅವುಗಳ ಮಾಲಿಕರಿಗೆ ಹಿಂದಿರುಗಿಸುವ ಅಧಿಕಾರವನ್ನು ಮ್ಯಾಜಿಸ್ಟ್ರೇಟ್‌ ಅಥವಾ ವಿಶೇಷ ನ್ಯಾಯಾಲಯಗಳು ಹೊಂದಿವೆ ಎಂದು ಹೈಕೋರ್ಟ್‌ ತೀರ್ಪು ನೀಡಿದೆ.

ನಗರದ ಬನಶಂಕರಿ ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ತೀರ್ಪು ಪ್ರಕಟಿಸಿದೆ.

ಪ್ರಕರಣದಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲರು, ಇಂತಹ ಪ್ರಕರಣಗಳಲ್ಲಿ ಪೊಲೀಸರಿಗೆ ವಾಹನಗಳನ್ನು ಬಿಡುಗಡೆಗೊಳಿಸಲು ನೀಡಿರುವ ಅಧಿಕಾರ ಭ್ರಷ್ಟಾಚಾರಕ್ಕೆ ನಾಂದಿ ಹಾಡುತ್ತದೆ ಎಂದು ಆಕ್ಷೇಪಿಸಿದ್ದರು. ಅಲ್ಲದೇ, ಮಾದಕ ವಸ್ತುಗಳ ಸಾಗಣೆಗೆ ಬಳಸಿದ ಆರೋಪದಡಿ ಜಪ್ತಿ ಮಾಡಿದ ವಾಹನಗಳನ್ನು ವಾರಸುದಾರರಿಗೆ ಮಧ್ಯಂತರ ಅವಧಿಯಲ್ಲಿ ಹಿಂದಿರುಗಿಸುವ ಬಗ್ಗೆ ಕೇಂದ್ರದ ಅಧಿಸೂಚನೆಯಲ್ಲಿ ಯಾವುದೇ ವಿವರವಿಲ್ಲ. ಇನ್ನು ಇಂತಹ ವಾಹನಗಳನ್ನು ಬಿಡುಗಡೆ ಮಾಡುವ ಅಧಿಕಾರ ವಿಚಾರಣಾ ನ್ಯಾಯಾಲಯಗಳಿಗೆ ಇದೆ ಎಂದು ದೇಶದ 18 ಹೈಕೋರ್ಟ್ ಗಳು ತೀರ್ಪು ನೀಡಿವೆ ಎಂದಿದ್ದರು. ಅರ್ಜಿದಾರರ ವಾದ ಪರಿಗಣಿಸಿರುವ ವಿಭಾಗೀಯ ಪೀಠ ಮ್ಯಾಜಿಸ್ಟ್ರೇಟ್ ಅಥವಾ ವಿಶೇಷ ನ್ಯಾಯಾಲಯಗಳಿಗೆ ಈ ಅಧಿಕಾರವಿದೆ ಎಂಬ ವಾದವನ್ನು ಪುರಸ್ಕರಿಸಿದೆ.

ಮಾದಕ ವಸ್ತುಗಳ ಸಾಗಣೆ ವೇಳೆ ಜಪ್ತಿ ಮಾಡಿದ ವಾಹನಗಳನ್ನು ಅವುಗಳ ವಾರಸುದಾರರಿಗೆ ಬಿಡುಗಡೆ ಮಾಡುವ ಕುರಿತಂತೆ ಹೈಕೋರ್ಟ್ ಏಕಸದಸ್ಯ ಪೀಠಗಳು ವಿಭಿನ್ನ ತೀರ್ಪು ನೀಡಿದ್ದವು. ನ್ಯಾ. ಜಾನ್ ಮೈಕೆಲ್ ಕುನ್ಹಾ ಅವರಿದ್ದ ಪೀಠ ವಾಹನಗಳನ್ನು ವಾರಸುದಾರರಿಗೆ ಬಿಡುಗಡೆ ಮಾಡುವ ಅಧಿಕಾರ ವಿಚಾರಣಾ ನ್ಯಾಯಾಲಯಕ್ಕೆ ಇದೆ ಎಂದಿತ್ತು. ಮತ್ತೊಂದು ಪ್ರಕರಣದಲ್ಲಿ ನ್ಯಾ. ಸೂರಜ್‌ ಗೋವಿಂದರಾಜು ಅವರಿದ್ದ ಪೀಠ, ವಾಹನ ಬಿಡುಗಡೆ ಮಾಡುವ ಅಧಿಕಾರ ಪೊಲೀಸ್‌ ನೇತೃತ್ವದ ವಿಲೇವಾರಿ ಸಮಿತಿಗೆ ಇದೆ’ ಎಂದು ತೀರ್ಪು ನೀಡಿತ್ತು. ಈ ವಿಭಿನ್ನ ನಿಲುವುಗಳ ಕುರಿತ ಗೊಂದಲ ನಿವಾರಿಸಲು ವಿಭಾಗೀಯ ಪೀಠ ರಚಿಸಲಾಗಿತ್ತು.


Share It

You cannot copy content of this page