ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.
ಪತ್ನಿ ಪ್ರತ್ಯೇಕ ಮನೆ ಮಾಡುವಂತೆ ಪತಿಗೆ ಒತ್ತಾಯಿಸುವುದು ಅಥವಾ ಅದರಿಂದ ಉಂಟಾಗುವ ವೈಮನಸ್ಯ ವಿಚ್ಛೇದನಕ್ಕೆ ಪರಿಗಣಿಸುವ ‘ಕ್ರೌರ್ಯ’ ವ್ಯಾಪ್ತಿಗೆ ಒಳಪಡದು ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಪತಿಯ ಮನವಿ ಮೇರೆಗೆ ವಿಚ್ಛೇದನ ಡಿಕ್ರಿ ನೀಡಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿ ತುಮಕೂರು ಮೂಲದ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ತೀರ್ಪು ಪ್ರಕಟಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಪತಿಯ ಕೋರಿಕೆ ಮೇರೆಗೆ ಕೌಟುಂಬಿಕ ನ್ಯಾಯಾಲಯ ಹಿಂದೂ ವಿವಾಹ ಕಾಯ್ದೆ-1955ರ ಸೆಕ್ಷನ್ 13(1) (ia) (ib) ಅಡಿ ವಿಚ್ಛೇದನ ಡಿಕ್ರಿ ನೀಡಿದೆ. ಪತಿ ಪತ್ನಿಯರ ನಡುವೆ ಸರಿಪಡಿಸಲಾಗದ ಮನಸ್ಥಾಪಗಳಿವೆ ಹಾಗೂ ಅವರು 9 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಆಧಾರದಲ್ಲಿ ವಿಚ್ಛೇದನ ನೀಡಿದೆ.
ಆದರೆ, ವಿಚ್ಛೇದನಕ್ಕೆ ಮೂಲ ಕಾರಣ ಎನ್ನಲಾದ ಪತ್ನಿಯ ‘ಪ್ರತ್ಯೇಕವಾಗಿ ವಾಸಿಸುವ ಕೋರಿಕೆ’ಯು ವಿಚ್ಛೇದನಕ್ಕೆ ಕಾರಣವಾಗುವ ‘ಕ್ರೌರ್ಯ’ ವ್ಯಾಪ್ತಿಯಲ್ಲಿ ಪರಿಗಣಿಸಲಾಗದು. ಇಂತಹ ಸಂದರ್ಭಗಳಲ್ಲಿ ವಿಚಾರಣಾ ನ್ಯಾಯಲಯವು ಪತಿ-ಪತ್ನಿಯರ ಸ್ಥಿತಿ, ಪರಿಸರ ಹಾಗೂ ಸಾಮಾಜಿಕ ಮೌಲ್ಯಗಳನ್ನು ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ, ಪತ್ನಿ ಪತಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದನ್ನು ‘ಕ್ರೌರ್ಯ’ ಎಂದು ಪರಿಗಣಿಸಲಾಗದು. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(1)(ia) ಪ್ರಕಾರ ಸಂಗಾತಿಯ ‘ಕ್ರೌರ್ಯ’ವನ್ನು ಆಧರಿಸಿ ವಿಚ್ಛೇದನ ಕೋರಬಹುದು. ಆದರೆ, ‘ಕ್ರೌರ್ಯ’ ಎಂಬುದು ಉದ್ದೇಶಪೂರ್ವಕವಾಗಿ ಮತ್ತು ನ್ಯಾಯಸಮ್ಮತವಲ್ಲದ ರೀತಿಯಲ್ಲಿ ವ್ಯಕ್ತಿಯ ಜೀವ, ಅಂಗ ಅಥವಾ ಆರೋಗ್ಯಕ್ಕೆ ಅಥವಾ ಮಾನಸಿಕವಾಗಿ, ದೈಹಿಕವಾಗಿ ಅಪಾಯ ಉಂಟುಮಾಡುವಂತಿರಬೇಕು. ಈ ಪ್ರಕರಣದಲ್ಲಿ ಅಂತಹ ಅಂಶಗಳಿಲ್ಲ.
ಇನ್ನು, ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಅಥವಾ ಕ್ರೌರ್ಯ ಎಸಗಿದ್ದಾರೆ ಎಂಬ ಪತಿ ಅಥವಾ ಪತ್ನಿಯ ಆರೋಪಗಳನ್ನು ಅವರು ವಾಸಿಸುತ್ತಿರುವ ಪರಿಸರ, ಸ್ಥಿತಿ ಹಾಗೂ ಸಾಮಾಜಿಕ ಮೌಲ್ಯಗಳನ್ನು ಪರಿಗಣಿಸಿ ನಿರ್ಧರಿಸಬೇಕು ಎಂದಿದೆ. ಅಲ್ಲದೇ, ದಂಪತಿಗೆ ಸದ್ಯ 19 ವರ್ಷದ ಮಗಳಿದ್ದು ಇವರ ವಿಚ್ಛೇದನವನ್ನು ಪುರಸ್ಕರಿಸಿದರೆ ಆಕೆಯ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಪೀಠ ಅಭಿಪ್ರಾಯಪಟ್ಟು, ಕೌಟುಂಬಿಕ ನ್ಯಾಯಾಲಯದ ವಿಚ್ಛೇದನ ಡಿಕ್ರಿಯನ್ನು ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ: 2002ರ ಮಾರ್ಚ್ 24ರಂದು ವಿವಾಹವಾಗಿದ್ದ ದಂಪತಿಗೆ 2003ರ ಜೂನ್ ನಲ್ಲಿ ಹೆಣ್ಣು ಮಗು ಜನಿಸಿತ್ತು. 2007ರಲ್ಲಿ ದಂಪತಿ ದೂರವಾಗಿದ್ದರು. ಆ ಬಳಿಕ ವಿಚ್ಛೇದನ ಕೋರಿ ಪತಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ, ಮದುವೆಯಾದ ತಕ್ಷಣ ಹೆಂಡತಿ ಪ್ರತ್ಯೇಕ ಮನೆ ಮಾಡುವಂತೆ ಒತ್ತಾಯಿಸಿದಳು. ಆದರೆ, ತಾಯಿ ಹಾಗೂ ತಮ್ಮನ ಜವಾಬ್ದಾರಿ ನನ್ನ ಮೇಲಿದ್ದರಿಂದ ನಾನು ಒಪ್ಪಲಿಲ್ಲ. ನಂತರ ಇದೇ ವಿಚಾರವಾಗಿ ತನ್ನೊಂದಿಗೆ ಹಾಗೂ ಮನೆಯರೊಂದಿಗೆ ಆಗಾಗ್ಗೆ ಜಗಳ ಮಾಡುತ್ತಿದ್ದಳು. ಹೇಳದೇ ಕೇಳದೇ ಆಕೆಯ ತಾಯಿ ಹಾಗೂ ಸಹೋದರಿ ಮನೆಗೆ ಹೋಗುತ್ತಿದ್ದಳು ಎಂದು ಆರೋಪಿಸಿದ್ದರು.
2007ರಲ್ಲಿ ಮಗುವಿನೊಂದಿಗೆ ತವರಿಗೆ ಹೋದ ಪತ್ನಿ ವಾಪಸ್ಸು ಬರುವಂತೆ ಕೋರಿದರೂ ಹಿಂದಿರುಗಿ ಬರಲಿಲ್ಲ. ಬರದಿದ್ದಾಗ ಲೀಗಲ್ ನೋಟಿಸ್ ಕಳುಹಿಸಿದೆ. ಇದಕ್ಕೆ ಪ್ರತಿಯಾಗಿ ಪತ್ನಿ ವರದಕ್ಷಿಣೆ ಕಿರುಕುಳ, ಜೀವ ಬೆದರಿಕೆ ಮತ್ತಿತರೆ ಆರೋಪಗಳ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಿದಳು. ಹೀಗಾಗಿ ವಿಚ್ಛೇದನ ಕೊಡಿಸಬೇಕು ಎಂದು ಪತಿ ಕೋರಿದ್ದರು. ಅದರಂತೆ, ಕೌಟುಂಬಿಕ ನ್ಯಾಯಾಲಯ ದಂಪತಿ ನಡುವೆ ವಿಪರೀತ ಮನಸ್ತಾಪವಿದೆ ಹಾಗೂ ಹಲವು ವರ್ಷಗಳಿಂದ ದೂರವಿದ್ದಾರೆ ಎಂಬ ಆಧಾರದಲ್ಲಿ 2016ರಲ್ಲಿ ವಿಚ್ಛೇದನ ಡಿಕ್ರಿ ನೀಡಿತ್ತು. ಈ ಆದೇಶ ರದ್ದು ಕೋರಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.
(MFA 3352/2016)
