News

ಹೈಕೋರ್ಟ್ ಜಡ್ಜ್ ಹೆಸರು ದುರ್ಬಳಕೆ ಆರೋಪ: ವಕೀಲೆ ವಿರುದ್ಧ ವಂಚನೆ ಕೇಸ್

Share It

ಬೆಂಗಳೂರು: ಅಪರಾಧ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ಕೊಡಿಸುವುದಾಗಿ ತಿಳಿಸಿ ಈ ಸಂಬಂಧ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇಲೆ ಮಹಿಳಾ ನ್ಯಾಯವಾದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಹೈಕೋರ್ಟ್​​​​​ ನ ಕಾನೂನು ವಿಭಾಗದ ಜಂಟಿ ರಿಜಿಸ್ಟ್ರಾರ್ ಎಂ.ರಾಜೇಶ್ವರಿ ನೀಡಿದ ದೂರಿನ ಮೇರೆಗೆ ವಕೀಲೆ ದಯೀನಾ ಬಾನು ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) 318 (4) ಅಡಿ ವಿಧಾನಸೌಧ ಪೊಲೀಸರು ಎಫ್ಐಆರ್ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

ವಕೀಲೆ ದಯೀನಾ ಬಾನು ಅವರು ತಮ್ಮ ಕಕ್ಷಿದಾರರೊಬ್ಬರಿಗೆ ಜಾಮೀನು ಕೊಡಿಸಲು ಹೈಕೋರ್ಟ್​​ ನ್ಯಾಯಮೂರ್ತಿಯೊಬ್ಬರಿಗೆ 50 ಲಕ್ಷ ರೂಪಾಯಿ ಹಣ ನೀಡಬೇಕಿದೆ. ಹಣ ನೀಡದಿದ್ದರೆ ಜಾಮೀನು ಅರ್ಜಿಯನ್ನು ಬೇರೊಬ್ಬ ವಕೀಲರಿಂದ ನಡೆಸಿಕೊಳ್ಳಿ ಎಂದಿದ್ದಾರೆ ಎಂದು ಆರೋಪಿಸಲಾಗಿದೆ.

ಎಫ್ಐಆರ್​​ ವಿವರ: ಅಪರಾಧ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ 24 ವರ್ಷದ ವಿಷ್ಣುದೇವನ್ ಜಾಮೀನು ಸಿಗದೇ ಮೂರು ವರ್ಷಗಳಿಂದ ಜೈಲಿನಲ್ಲಿದ್ದ. ಮಗನನ್ನು ಜಾಮೀನಿನ ಮೇಲೆ ಬಿಡಿಸುವ ಕುರಿತಂತೆ ತಾಯಿಯು ಮಹಿಳಾ ನ್ಯಾಯವಾದಿ ಮರೀನಾ ಫರ್ನಾಂಡಿಸ್ ಅವರನ್ನು ಭೇಟಿ ಮಾಡಿ ವಾದ ಮಂಡಿಸಲು ಕೇಳಿಕೊಂಡಿದ್ದರು‌. ಇದಕ್ಕೆ ಪ್ರತಿಯಾಗಿ ಮರೀನಾ 10 ಲಕ್ಷ ರೂ. ಹಣ ಪಡೆದಿದ್ದರು. ಆರೋಪಿಗೆ ಜಾಮೀನು ಕೊಡಿಸಲು ಮಹಿಳಾ ನ್ಯಾಯವಾದಿ ವಿಫಲವಾದ ಬಳಿಕ ತಾಯಿ ಥೆರೆಸಾ, ತಾವು ನೀಡಿದ ಹಣ ವಾಪಸ್ ನೀಡುವಂತೆ ಕೇಳಿಕೊಂಡಿದ್ದರು. ಆಗ ವಕೀಲೆ 9 ಲಕ್ಷ ರೂ. ಮೊತ್ತಕ್ಕೆ 3 ಚೆಕ್ ನೀಡಿದ್ದರು. ಆದರೆ ಹಣ ಹಿಂದಿರುಗಿಸಲಿರಲಿಲ್ಲ ಎಂದು ಎಫ್ಐಆರ್​​ನಲ್ಲಿ ಆರೋಪಿಸಲಾಗಿದೆ.

ಅಲ್ಲದೇ, ತಾವು ನೀಡಿದ ಹಣ ವಾಪಸ್ ನೀಡುವಂತೆ ಮಹಿಳಾ ನ್ಯಾಯವಾದಿ ಬಳಿ ತಾಯಿ ಥೆರೆಸಾ ಕೇಳಿಕೊಂಡಾಗ ವಕೀಲೆ ಮರೀನಾ ಅವರು ಥೆರೆಸಾಗೆ ಆರತಿ ಎಂಬವರನ್ನು ಪರಿಚಯಿಸಿದ್ದರು‌. ಅವರು ತಮಗೆ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಪರಿಚಯ ಇರುವುದಾಗಿ ಹೇಳಿ 72 ಸಾವಿರ ರೂ. ಪಡೆದಿದ್ದರು. ಆದರೆ, ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ವೇಳೆ, ಮಹಿಳಾ ನ್ಯಾಯವಾದಿ ದಯೀನಾ ಭಾನು ಅವರು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು 50 ಲಕ್ಷ ರೂ. ಹಣವನ್ನು ಜಾಮೀನು ಕೊಡಿಸಲು ನಿರೀಕ್ಷಿಸುತ್ತಿದ್ದಾರೆ. ಹಣ ನೀಡಲು ಸಾಧ್ಯವಾಗದಿದ್ದರೆ ಜಾಮೀನು ಪಡೆಯಲು ಬೇರೊಬ್ಬ ವಕೀಲರನ್ನು ನೇಮಿಸಿಕೊಳ್ಳಿ ಎಂದು ಕಕ್ಷಿದಾರರಿಗೆ ತಿಳಿಸಿರುವ ಬಗ್ಗೆ ಎಫ್ಐರ್​​ನಲ್ಲಿ ಉಲ್ಲೇಖಿಸಲಾಗಿದೆ.

ಮಗನಿಗೆ ಜಾಮೀನು ಪಡೆಯಲು ಸಾಧ್ಯವಾಗದ ತಾಯಿ ಥೆರೆಸಾ ನ್ಯಾಯವಾದಿ ದಯೀನಾ ಬಾನು ಅವರು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂದು ಹೈಕೋರ್ಟ್ ಕಾನೂನು ವಿಭಾಗದ ಜಂಟಿ ರಿಜಿಸ್ಟ್ರಾರ್ ಅವರ ಗಮನಕ್ಕೆ ತಂದಿದ್ದರು. ಈ ಆರೋಪದ ಬಗ್ಗೆ ಪ್ರಾಥಮಿಕ ಪರಿಶೀಲನೆ ನಡೆಸಿದ ರಿಜಿಸ್ಟ್ರರ್ ಅವರು ಹೈಕೋರ್ಟ್ ನ್ಯಾಯಮೂರ್ತಿ ಹೆಸರನ್ನು ದುರ್ಬಳಕೆ ಆರೋಪದ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.


Share It

You cannot copy content of this page