News

ಅಪಘಾತ: ಪರಿಹಾರ ಮೊತ್ತ ಒಂದೂವರೆ ಪಟ್ಟು ಹೆಚ್ಚಿಸಿದ ಹೈಕೋರ್ಟ್‌

Share It

ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡು ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡಿದ್ದ 17 ವರ್ಷದ ಯುವಕನಿಗೆ ನೀಡಿದ್ದ ಪರಿಹಾರವನ್ನು ಹೈಕೋರ್ಟ್‌ ಒಂದೂವರೆ ಪಟ್ಟು ಹೆಚ್ಚಿಸಿ ಆದೇಶ ಮಾಡಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ 17 ವರ್ಷದ ಯುವಕ ಕಿರಣ್‌ ಕುಮಾರ್‌ ಹಾಗು ವಿಮಾ ಸಂಸ್ಥೆ ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ. ಕೆ.ಎಸ್ ಮುದ್ಗಲ್ ಹಾಗೂ ನ್ಯಾ. ವಿಜಯ್‌ ಕುಮಾರ್‌ ಪಾಟೀಲ್‌ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ: ಕಿರಣ್‌ ಕುಮಾರ್‌ 2017ರ ಮಾರ್ಚ್‌ನಲ್ಲಿ ಮಡಕಶಿರಾ -ಅಮರಾಪುರಂ ರಸ್ತೆಯಲ್ಲಿ ಹಿರೇತುರ್ಪಿ ಗ್ರಾಮದ ಅಂಜನೇಯಸ್ವಾಮಿ ದೇವಾಲಯದ ಬಳಿ ಕಾರಿನಲ್ಲಿ ತೆರಳುತ್ತಿದ್ದಾಗ ಕರ್ನಾಟಕದಲ್ಲಿ ನೋಂದಾಯಿಸಿದ ಟ್ರಕ್‌ ಡಿಕ್ಕಿ ಹೊಡೆದಿತ್ತು. ಕಾರಿನಲ್ಲಿ ಇದ್ದವರೆಲ್ಲಾ ಗಾಯಗೊಂಡಿದ್ದರು. ಕಾರಿನ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದನು.

ಘಟನೆ ನಡೆದಾಗ ಕಿರಣ್ ಕುಮಾರ್‌ಗೆ 10 ವರ್ಷವಾಗಿತ್ತು. ಗಾಯಗೊಂಡಿದ್ದ ಆತನಿಗೆ ಮೊದಲು ಅನಂತಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಪರಿಶೀಲಿಸಿದಾಗ ಆತನ ಎರಡೂ ಕಣ್ಣುಗಳು ದೃಷ್ಟಿ ಕಳೆದುಕೊಂಡಿರುವುದು ಬೆಳಕಿಗೆ ಬಂದಿತ್ತು. ಇದರಿಂದ ಮದುವೆಯಾಗುವ ಸಾಧ್ಯತೆಯೂ ತಪ್ಪಿ ಹೋಗಿತ್ತು. ಈ ಹಿನ್ನೆಲೆಯಲ್ಲಿ ಕಿರಣ್ 70 ಲಕ್ಷ ರೂಪಾಯಿ ಪರಿಹಾರ ಕೋರಿ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ನ್ಯಾಯಮಂಡಳಿ, 2019ರಲ್ಲಿ 8.3 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಆದೇಶ ನೀಡಿತ್ತು.

ಎಂಎಸಿಟಿ ನೀಡಿದ್ದ ಪರಿಹಾರ ಸೂಕ್ತವಾಗಿಲ್ಲ. ಹೀಗಾಗಿ ಹೆಚ್ಚುವರಿ ಪರಿಹಾರ ಕೊಡಿಸುವಂತೆ ಕೋರಿ ಕಿರಣ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಮಾ ಕಂಪನಿಯು ಟ್ರಕ್‌ ಪರ್ಮಿಟ್‌ ಇಲ್ಲದೆ ಸಂಚರಿಸುತ್ತಿತ್ತು. ಹಾಗಾಗಿ, ಪರಿಹಾರ ನೀಡಬೇಕಿಲ್ಲವೆಂದು ವಾದಿಸಿತ್ತು.

ಒಂದೂವರೆ ಪಟ್ಟು ಪರಿಹಾರ ಹೆಚ್ಚಳ: ವಾದ -ಪ್ರತಿವಾದ ಆಲಿಸಿದ ನ್ಯಾಯಾಲಯ, ”ವೈದ್ಯರು ನೀಡಿರುವ ಸಾಕ್ಷಿಯಲ್ಲಿ ಅರ್ಜಿದಾರ ಎರಡೂ ಕಣ್ಣುಗಳ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಜತೆಗೆ ಮುಖದಲ್ಲಿ ಗಾಯಗಳಾಗಿದ್ದವು ಎಂದು ಹೇಳಲಾಗಿದೆ. ಅದಲ್ಲದೆ, ಅವರು ಮದುವೆ ಸೇರಿದಂತೆ ಹಲವು ಆನಂದದ ಕ್ಷಣಗಳಿಂದ ವಂಚಿತರಾಗಿದ್ದಾರೆ. ಹೀಗಾಗಿ, ಪರಿಹಾರವನ್ನು ಒಂದೂವರೆ ಪಟ್ಟು ಹೆಚ್ಚಳ ಮಾಡಲಾಗುತ್ತಿದೆ,” ಎಂದು ಆದೇಶಿಸಿದೆ.

ಅಲ್ಲದೇ, ಸಂತ್ರಸ್ತ ಯುವಕನಿಗೆ 2017 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇಕಡಾ 9 ರ ಬಡ್ಡಿ ಸಹಿತ 21.8 ಲಕ್ಷ ರೂ. ಪರಿಹಾರ ಪಾವತಿಸುವಂತೆ ನ್ಯಾಯಾಲಯ ಸೋಂಪೋ ಜನರಲ್‌ ವಿಮಾ ಕಂಪನಿಗೆ ಸೂಚನೆ ನೀಡಿದೆ. ಜತೆಗೆ, ವಿಮಾ ಕಂಪನಿ ಮೊದಲು ಪರಿಹಾರ ಪಾವತಿಸಿ ನಂತರ ಆ ಮೊತ್ತವನ್ನು ಟ್ರಕ್‌ ಮಾಲೀಕರಿಂದ ವಸೂಲು ಮಾಡಿಕೊಳ್ಳಲು ಸೂಚಿಸಿದೆ.


Share It

You cannot copy content of this page