News

ಹೆಂಡತಿಯ ದೇಹ ಆಕೆಯ ಹಕ್ಕು, ಗಂಡನ ಮಾಲಿಕತ್ವದಲ್ಲಿ ಇರುವುದಿಲ್ಲ: ಹೈಕೋರ್ಟ್

Share It

ಗಂಡಸರು ತಮ್ಮ ಹಳೆಯ ಮನಸ್ಥಿತಿಯನ್ನು ಬಿಟ್ಟು ಹೊರಬರಬೇಕು. ಹೆಂಡತಿಯ ದೇಹ, ಖಾಸಗಿತನ ಅವಳದೇ ಹಕ್ಕಾಗಿರುತ್ತದೆ. ಆಕೆಯು ಪತಿಯ ಮಾಲೀಕತ್ವಕ್ಕೆ ಒಳಪಡುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪತ್ನಿಯ ಅರಿವಿಗೆ ಬಾರದಂತೆ ಆಕೆಯ ಜತೆಗಿದ್ದ ಕ್ಷಣಗಳನ್ನು ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಿಕ್ಕಿಬಿದ್ದ ಪತಿ, ತನ್ನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿದ್ದ. ಈ ಪ್ರಕರಣವನ್ನು ವಜಾಗೊಳಿಸುವ ವೇಳೆ ಹೈಕೋರ್ಟ್ ಗಂಡಿನ ಮನಸ್ಥಿತಿಯನ್ನು ಟೀಕಿಸಿದೆ.

ಹೈಕೋರ್ಟ್ ತನ್ನ ಆದೇಶದಲ್ಲಿ, ಪತ್ನಿಯು ಪತಿಯ ಅಧೀನಕ್ಕೆ ಒಳಪಟ್ಟಿರುವುದಿಲ್ಲ. ಆಕೆಯೂ ತನ್ನದೇ ಆದ ಹಕ್ಕುಗಳನ್ನು ಹೊಂದಿರುತ್ತಾಳೆ. ಆಕೆಯ ದೈಹಿಕ ಸ್ವಾಯತ್ತತೆ ಮತ್ತು ಖಾಸಗಿತನವನ್ನು ಗೌರವಿಸುವುದು ಕಾನೂನಿನ ಬಾಧ್ಯತೆಯಾಗಿದೆ. ಅಷ್ಟೇ ಅಲ್ಲ, ನಿಜವಾದ ಅರ್ಥದಲ್ಲಿ ಪತ್ನಿಯನ್ನು ಸಮನಾಗಿ ಕಾಣುವುದು ಗಂಡನ ನೈತಿಕ ಕರ್ತವ್ಯವೂ ಆಗಿದೆ ಎಂದು ಹೇಳಿದೆ. ಜತೆಗೆ ಪತ್ನಿಯ ದೇಹದ ಮೇಲೆ ಪತಿ ಮಾಲಿಕತ್ವ ಹೊಂದಿಲ್ಲ ಎಂಬುದನ್ನು ಗಂಡಂದಿರು ಈಗಲಾದರೂ ಅರಿತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ತನ್ನ ಹೆಂಡತಿಯ ಅರಿವಿಗೆ ಬಾರದೆ ಮತ್ತು ಒಪ್ಪಿಗೆಯಿಲ್ಲದೆ ಆಕೆಯ ಜತೆಗಿದ್ದ ಆತ್ಮೀಯ ಕ್ಷಣಗಳನ್ನು ಆರೋಪಿತ ಗಂಡ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡಿದ್ದ. ಬಳಿಕ ಅದನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ. ಸಾಲದೆಂಬಂತೆ ಅದನ್ನು ಹೆಂಡತಿಯ ಸಂಬಂಧಿಯೊಂದಿಗೆ ಹಂಚಿಕೊಂಡಿದ್ದ.

ಈ ವಿಚಾರ ಪತ್ನಿ ಗಮನಕ್ಕೆ ಬಂದ ನಂತರ ಗಂಡನ ವಿರುದ್ಧ ಐಟಿ ಕಾಯ್ದೆ ಮತ್ತು ಇತರೆ ಕಾಯ್ದೆಗಳ ಅಡಿ ಕ್ರಿಮಿನಲ್ ಕೇಸ್ ದಾಖಲಿಸಲಾಗಿತ್ತು. ಆ ಬಳಿಕ ಪತಿ ತನ್ನ ವಿರುದ್ಧದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ. ಜತೆಗೆ ತಾನು ದೂರುದಾರ ಮಹಿಳೆಯ ಕಾನೂನುಬದ್ಧ ಪತಿ ಆಗಿರುವುದರಿಂದ ಐಟಿ ಕಾಯ್ದೆಯ ಸೆಕ್ಷನ್ 67 ಬಿ ಅಡಿಯಲ್ಲಿ ಅಪರಾಧ ಎಸಗಿಲ್ಲ ಎಂದು ವಾದಿಸಿದ್ದ.


Share It

You cannot copy content of this page