ಲೇಖನ: ಮಂಜೇಗೌಡ ಕೆ.ಜಿ, ವಕೀಲರು, 9980178111
ದೆಹಲಿ: ಹೆತ್ತವರನ್ನು ಮಕ್ಕಳು ನೋಡಿಕೊಳ್ಳದೆ ಹೋದರೆ ಅಥವಾ ನಿರ್ಲಕ್ಷಿಸಿದರೆ, ಅವರು ತಮ್ಮ ಮಕ್ಕಳ ಹೆಸರಿಗೆ ಮಾಡಿದ್ದಂತಹ ಆಸ್ತಿಯ ದಾನ ಪತ್ರವನ್ನು ರದ್ದುಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇಂತಹ ಸಂದರ್ಭಗಳಲ್ಲಿ ಹಿರಿಯ ನಾಗರಿಕರು ಮತ್ತು ಪೋಷಕರ ಕ್ಷೇಮಾಭಿವೃದ್ಧಿ ಕಾಯ್ದೆಯನ್ನು ನ್ಯಾಯಾಲಯಗಳು ಕಟ್ಟುನಿಟ್ಟಾಗಿ ಅರ್ಥೈಸುವ ಬದಲು ಸ್ವಲ್ಪ ಉದಾರವಾಗಿ ಅರ್ಥೈಸಬೇಕು ಎಂದಿರುವ ಸುಪ್ರೀಂಕೋರ್ಟ್, ದಾನ ಪತ್ರದ ಮೂಲಕ ಮಾಡಲಾಗಿರುವ ಆಸ್ತಿಯ ವರ್ಗಾವಣೆಯನ್ನು ರದ್ದುಪಡಿಸಬಹುದು ಎಂದು ಸ್ಪಷ್ಟಪಡಿಸಿದೆ.
ತಮ್ಮನ್ನು ನೋಡಿಕೊಳ್ಳದ ಮಕ್ಕಳಿಗೆ ದಾನ ಪತ್ರದ ಮೂಲಕ ಆಸ್ತಿ ವರ್ಗಾವಣೆ ಮಾಡಿರುವುದನ್ನು ರದ್ದುಗೊಳಿಸುವಂತೆ ಕೋರಿ ಮಧ್ಯಪ್ರದೇಶದ ಮಹಿಳೆಯೊಬ್ಬರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಿ.ಟಿ ರವಿಕುಮಾರ್ ಹಾಗೂ ನ್ಯಾ. ಸಂಜಯ್ ಕರೋಲ್ ಅವರಿದ್ದ ಪೀಠ, ಹಿರಿಯ ನಾಗರಿಕರು ಮತ್ತು ಪೋಷಕರ ನಿರ್ವಹಣೆ ಮತ್ತು ಕ್ಷೇಮಾಭಿವೃದ್ಧಿ ಕಾಯ್ದೆಯನ್ನು ಹಿರಿಯ ನಾಗರಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಜಾರಿಗೆ ತರಲಾಗಿದೆ. ಇಂತಹ ಸಂದರ್ಭದಲ್ಲಿ ಕಾನೂನನ್ನು ಕಟ್ಟುನಿಟ್ಟಾಗಿ ಅರ್ಥೈಸುವುದಕ್ಕಿಂತ ಕಾಯ್ದೆಯ ಮೂಲ ಉದ್ದೇಶದೊಂದಿಗೆ ಉದಾರವಾಗಿ ಅರ್ಥೈಸಬೇಕು. ಪೋಷಕರನ್ನು ನೋಡಿಕೊಳ್ಳಬೇಕು ಎಂಬ ನಿಯಮವನ್ನು ದಾನ ಪತ್ರದಲ್ಲಿ ಉಲ್ಲೇಖಿಸಿಲ್ಲ ಎಂಬ ಕಾರಣಕ್ಕೆ ದಾನ ಪತ್ರ ರದ್ದು ಕೋರಿಕೆಯನ್ನು ನಿರಾಕರಿಸುವುದು ಸೂಕ್ತವಲ್ಲ ಎಂದು ತೀರ್ಪು ನೀಡಿದೆ.
ಅಲ್ಲದೇ, ಒಂದು ವೇಳೆ ಪೋಷಕರನ್ನು ನೋಡಿಕೊಳ್ಳಬೇಕು ಎಂಬ ನಿಬಂಧನೆಯನ್ನು ದಾನಪತ್ರದಲ್ಲಿ ಉಲ್ಲೇಖಿಸದಿದ್ದರೂ, ಆಸ್ತಿಯನ್ನು ಪೋಷಕರು ತಮ್ಮನ್ನು ನೋಡಿಕೊಳ್ಳುತ್ತಾರೆಂಬ ನಿಟ್ಟಿನಲ್ಲಿಯೇ ವರ್ಗಾವಣೆ ಮಾಡಿರುತ್ತಾರೆ. ಇಂತಹ ಸಂದರ್ಭದಲ್ಲಿ ಕಾನೂನನ್ನು ಕಟ್ಟುನಿಟ್ಟಾಗಿ ಅರ್ಥೈಸುವುದಕ್ಕಿಂತ ಉದಾರವಾಗಿ ಅರ್ಥೈಸಿಕೊಳ್ಳುವ ಅವಶ್ಯಕತೆ ಇರುತ್ತದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಹಿನ್ನೆಲೆ: ತನ್ನನ್ನು ನೋಡಿಕೊಳ್ಳುವ ಭರವಸೆ ಮೇರೆಗೆ ಮಧ್ಯಪ್ರದೇಶದ ಮಹಿಳೆ ತನ್ನ ಮಗನಿಗೆ ದಾನ ಪತ್ರದ ಮೂಲಕ ಆಸ್ತಿ ವರ್ಗಾಯಿಸಿದ್ದರು. ದಾನ ಪತ್ರದ ವೇಳೆ ತನ್ನನ್ನು ನೋಡಿಕೊಳ್ಳುವುದಾಗಿ ಮಗ ಆಶ್ವಾಸನೆಯನ್ನು ಪತ್ರದ ಮೂಲಕ ನೀಡಿದ್ದ. ಆದರೆ, ಮಗ ತನ್ನ ಯೋಗಕ್ಷೇಮ ನೋಡಿಕೊಳ್ಳದಿದ್ದಾಗ ಆಸ್ತಿ ವರ್ಗಾವಣೆ ರದ್ದು ಕೋರಿ ತಾಯಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದಾಗ ಅರ್ಜಿ ವಿಚಾರಣೆ ನಡೆಸಿದ ಮಧ್ಯಪ್ರದೇಶ ಹೈಕೋರ್ಟ್ ವಿಭಾಗೀಯ ಪೀಠ, ಕಾಯ್ದೆಯ ಸೆಕ್ಷನ್ 23ರ ಅನ್ವಯ ತೀರ್ಪು ನೀಡಿತ್ತು. ದಾನ ಪತ್ರದ ಮೂಲಕ ತಾಯಿ ಮಗನಿಗೆ ಮಾಡಿದ್ದ ಆಸ್ತಿ ವರ್ಗಾವಣೆಯನ್ನು ರದ್ದುಪಡಿಸಲು ನಿರಾಕರಿಸಿತ್ತು.
ಕಾಯ್ದೆಯ ಸೆಕ್ಷನ್ 23 ರಲ್ಲಿ, ಈ ಕಾನೂನು ಜಾರಿಯಾದ ನಂತರ, ಹಿರಿಯ ನಾಗರಿಕರಾದ ವ್ಯಕ್ತಿ ತನ್ನ ಆಸ್ತಿಯನ್ನು ಯಾರಿಗಾದರೂ ತನ್ನನ್ನ ನೋಡಿಕೊಳ್ಳಬೇಕೆಂಬ ಷರತ್ತಿನೊಂದಿಗೆ ಉಡುಗೊರೆಯಾಗಿ ನೀಡಿದರೆ, ಆಸ್ತಿಯನ್ನು ಸ್ವೀಕರಿಸುವವರು ಆ ಹಿರಿಯ ನಾಗರಿಕರನ್ನು ನೋಡಿಕೊಳ್ಳಬೇಕು. ಹಾಗೆ ನೋಡಿಕೊಳ್ಳದಿದ್ದರೆ, ಆಸ್ತಿ ವರ್ಗಾವಣೆಯನ್ನು ವಂಚನೆ ಅಥವಾ ಬೆದರಿಕೆಯಿಂದ ಮಾಡಲಾಗಿದೆ ಎಂದು ಪರಿಗಣಿಸಲಾಗುತ್ತದೆ ಎಂದು ತಿಳಿಸುತ್ತದೆ.
ಈ ನಿಯಮವನ್ನು ಯಥಾವತ್ತಾಗಿ ಅರ್ಥೈಸಿದ್ದ ಹೈಕೋರ್ಟ್ ಆಸ್ತಿ ದಾನ ಪತ್ರದ ಮೂಲಕ ವರ್ಗಾವಣೆ ಮಾಡುವಾಗ ಪತ್ರದಲ್ಲಿ ನೋಡಿಕೊಳ್ಳುವ ಷರತ್ತು ವಿಧಿಸಿಲ್ಲ. ಹೀಗಾಗಿ ದಾನಪತ್ರ ರದ್ದು ಮಾಡಲಾಗದು ಎಂದು ಸ್ಪಷ್ಟಪಡಿಸಿತ್ತು. ಇದೀಗ ಸುಪ್ರೀಂಕೋರ್ಟ್ ಹೈಕೋರ್ಟ್ ತೀರ್ಪು ಬದಿಗೆ ಸರಿಸಿದ್ದು, ದಾನಪತ್ರವನ್ನು ರದ್ದುಪಡಿಸಿದೆ. ಜತೆಗೆ ಮಗನಿಗೆ ಆಸ್ತಿ ಹಿಂದಿರುಗಿಸುವಂತೆ ನಿರ್ದೇಶಿಸಿದೆ.
(CIVIL APPEAL NO. 10927 OF 2024)