ಬೆಂಗಳೂರು: ತಂದೆ ದಾನಪತ್ರದ ಮೂಲಕ ಆಸ್ತಿ ವರ್ಗಾವಣೆ ಮಾಡಿದ್ದನ್ನು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕ್ಷೇಮಾಭಿವೃದ್ಧಿ ಕಾಯ್ದೆ 2007ರ ಸೆಕ್ಷನ್ 16ರಡಿ ರದ್ದು ಕೋರಿ ಮಕ್ಕಳು ಅರ್ಜಿ ಸಲ್ಲಿಸಲು ಬರುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕ್ಷೇಮಾಭಿವೃದ್ಧಿ ಕಾಯ್ದೆ 2007ರ ಸೆಕ್ಷನ್ 16ರ ಅಡಿ ಆಸ್ತಿ ವರ್ಗಾವಣೆ ರದ್ದು ಕೋರಿ ಮೇಲ್ಮನವಿ ಸಲ್ಲಿಸುವ ಅಧಿಕಾರ ಪೋಷಕರಿಗೆ ಮಾತ್ರ ಇರಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ತಂದೆ ಸಹೋದರನಿಗೆ ಮಾಡಿದ್ದ ದಾನ ಪತ್ರವನ್ನು ರದ್ದುಪಡಿಸುವ ವಿಚಾರವಾಗಿ ಮತ್ತೋರ್ವ ಪುತ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಸೆಕ್ಷನ್ 16ರಡಿ, ಪೋಷಕರು ಮಾಡಿದ್ದ ಆಸ್ತಿ ವರ್ಗಾವಣೆ ರದ್ದು ಕೋರಿ ಮಕ್ಕಳು ಅರ್ಜಿ ಸಲ್ಲಿಸಲು ಬರುವುದಿಲ್ಲ. ಈ ಕುರಿತಂತೆ ವಿವಾದಗಳಿದ್ದಲ್ಲಿ ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್ ನಲ್ಲಿ ಅಸಲು ದಾವೆ ಹೂಡಿ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಹೈಕೋರ್ಟ್ ಸೂಚಿಸಿದೆ.
ಅಲ್ಲದೇ, ಹಿರಿಯ ನಾಗರಿಕರ ಕಾಯ್ದೆಯ ಸೆಕ್ಷನ್ 23ರ ಪ್ರಕಾರ ಹಿರಿಯ ನಾಗರಿಕರು ಅಥವಾ ಪೋಷಕರು ತಮ್ಮ ಆಸ್ತಿಯನ್ನು ವರ್ಗಾವಣೆ ಮಾಡಿದ್ದರೆ, ಆಗ ಮಕ್ಕಳು ತಮ್ಮ ದೈಹಿಕ ಅಗತ್ಯತೆಗಳು ಮತ್ತು ಮೂಲಸೌಕರ್ಯ ಒದಗಿಸಬೇಕೆಂಬ ಷರತ್ತುಗಳನ್ನು ವಿಧಿಸಬಹುದು. ಆನಂತರ ಒಂದು ವೇಳೆ ಅವರು ಆ ನಿರ್ಬಂಧನೆಗಳನ್ನು ಪೂರೈಸದೇ ಇದ್ದಲ್ಲಿ, ಉಪ ವಿಭಾಗಾಧಿಕಾರಿ ಮುಂದೆ ತಮ್ಮ ದಾನ ಪತ್ರ ರದ್ದು ಕೋರಿ ಅರ್ಜಿ ಸಲ್ಲಿಸಬಹುದು. ಅದರಂತೆ ಸೆಕ್ಷನ್ 16ರಡಿ ಎಸಿ/ಡಿಸಿ ಅವರ ಅರ್ಜಿಗಳನ್ನು ಪರಿಗಣಿಸಿ ಸೂಕ್ತ ಆದೇಶವನ್ನು ಹೊರಡಿಸಬಹುದು. ಹೀಗೆ ಅರ್ಜಿ ಸಲ್ಲಿಸುವ ಅಧಿಕಾರ ಪೋಷಕರಿಗಿದೆಯೇ ಹೊರತು ಮಕ್ಕಳಿಗಲ್ಲ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಕೃಷ್ಣ ಎಂಬುವರು 2019ರಲ್ಲಿ ತಮ್ಮ ಆಸ್ತಿಯಲ್ಲಿ ಕೆಲ ಭಾಗವನ್ನು ಹಿರಿಯ ಪುತ್ರ ಅಯ್ಯಪ್ಪ ಎಂಬುವರ ಹೆಸರಿಗೆ ದಾನ ಪತ್ರದ ಮೂಲಕ ವರ್ಗಾಯಿಸಿದ್ದರು. ಕೆಲ ವರ್ಷಗಳ ಬಳಿಕ ಹಿರಿಯ ನಾಗರಿಕರ ಕಾಯ್ದೆ ಅಡಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿ, ಅಕ್ರಮವಾಗಿ ತಮ್ಮಿಂದ ದಾನಪತ್ರ ಮಾಡಿಸಿಕೊಳ್ಳಲಾಗಿದೆ. ತಮ್ಮ ಹಿರಿಯ ಪುತ್ರ ಯಾವುದೇ ಸೌಕರ್ಯ ನೀಡುತ್ತಿಲ್ಲ. ಹಾಗಾಗಿ ದಾನ ಪತ್ರ ರದ್ದುಪಡಿಸಬೇಕು ಎಂದು ಕೋರಿದ್ದರು. 2023ರಲ್ಲಿ ಮನವಿ ಪುರಸ್ಕರಿಸಿದ್ದ ಎಸಿ, ದಾನಪತ್ರ ರದ್ದು ಮಾಡಿ ಆದೇಶಿಸಿದ್ದರು.
ಈ ಆದೇಶ ಪ್ರಶ್ನಿಸಿ ಹಿರಿಯ ಪುತ್ರ ಅಯ್ಯಪ್ಪ ಹಿರಿಯ ನಾಗರಿಕ ಕಾಯ್ದೆಯ ಸೆಕ್ಷನ್ 16ರ ಅಡಿ ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ್ದರು. ಈ ನಡುವೆ ತಂದೆ ಕೃಷ್ಣ ತಮ್ಮ ಆಸ್ತಿಯನ್ನು ಎರಡನೇ ಪುತ್ರ ಲೋಕೇಶ್ ಹೆಸರಿಗೆ ವಿಲ್ ಮಾಡಿದ್ದರು. ಮೊದಲನೇ ಪುತ್ರ ಸಲ್ಲಿಸಿದ್ದ ಮೇಲ್ಮನವಿ ಬಾಕಿ ಇದ್ದಾಗಲೇ ಕೃಷ್ಣ ಮೃತಪಟ್ಟಿದ್ದರು. ಹೀಗಾಗಿ ಆಸ್ತಿಗೆ ಲೋಕೇಶ್ ಮತ್ತವರ ಸಹೋದರಿ ಉತ್ತರಾಧಿಕಾರಿಗಳಾಗಿದ್ದರು. ಇದರ ನಡುವೆ ಅಯ್ಯಪ್ಪ ಸಲ್ಲಿಸಿದ್ದ ಮೇಲ್ಮನವಿಯನ್ನು ಜಿಲ್ಲಾಧಿಕಾರಿ ಮಾನ್ಯ ಮಾಡಿದ್ದರು. ಜಿಲ್ಲಾಧಿಕಾರಿ ಆದೇಶ ಪ್ರಶ್ನಿಸಿ ಲೋಕೇಶ್ ಹೈಕೋರ್ಟ್ ಮೊರೆ ಹೋಗಿದ್ದರು.